ಅಬುದಾಬಿಯಲ್ಲಿ ವಾಸಿಸುವ 29 ವರ್ಷದ ಭಾರತೀಯ ಮೂಲದ ಅನಿಲ್‌ಕುಮಾರ್ ಬೊಲ್ಲಾ ಎಂಬ ವ್ಯಕ್ತಿ ಅಕ್ಟೋಬರ್ 18 ರಂದು ನಡೆದ 23 ನೇ ಲಕ್ಕಿ ಡೇ ಡ್ರಾದಲ್ಲಿ ಯುಎಇ ಲಾಟರಿಯ 100 ಮಿಲಿಯನ್ ದಿರಾಮ್ ( 240 ಕೋಟಿಗೂ ಹೆಚ್ಚು) ಜಾಕ್‌ಪಾಟ್ ಹೊಡೆದಿದ್ದಾರೆ. ಇದರಲ್ಲಿ ವಿಶೇಷವೆಂದರೆ ಆತ ಲಾಟರಿಗಾಗಿ ಆಯ್ಕೆ ಮಾಡಿಕೊಂಡ ನಂಬರ್. ಇದೇನು ಲಾಟರಿ ನಂಬರ್ ವಿಶೇಷ ಅಂದ್ರೆ ಅದು ಆತನ ತಾಯಿಯ ಹುಟ್ಟುಹಬ್ಬದ ಸಂಖ್ಯೆ ಎಂಬುದು ಈಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ
ಯುಎಇ ಲಾಟರಿಯು ವಿಜೇತರ ಸಂದರ್ಶನದ ವೀಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದೆ. ಈ ಸಂದರ್ಶನದಲ್ಲಿ ಅನಿಲ್ ಕುಮಾರ್ ಇದೇ ನಂಬರ್ ಅನ್ನು ಲಾಟರಿಗೆ ಆಯ್ಕೆ ಮಾಡಿದ್ದೇಕೆ? ಎಂದು ಕೇಳಿದ ಪ್ರಶ್ನೆಗೆ ಲಾಟರಿ ವಿಜೇತ ಅನಿಲ್ ಕುಮಾರ್ ಉತ್ತರಿಸಿ ನಾನು ಲಾಟರಿ ಡ್ರಾ ಕರೆ ಬಂದಾಗ ನಾನು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ, ನನಗೆ ಕರೆ ಬಂದಾಗ ನನಗೆ ಇದು ಅವಾಸ್ತವಿಕ ಎಂದೆನಿಸಿತು, ನಂತರ ಅದು ನಿಜ ಎಂದು ತಿಳಿದಾಗ ನನಗೆ ಆಘಾತ ಹಾಗೂ ಸಂತೋಷವಾಗಿತ್ತು, ಈ ಗೆಲುವು ನನ್ನ ಕನಸಿಗೆ ಮೀರಿದ್ದು ಎಂದಿದ್ದಾರೆ.
ಅನಿಲ್ ಕುಮಾರ್ ನಾನು ಈ ಹಣವನ್ನು ಜವಾಬ್ದಾರಿಯುತವಾಗಿ ಹೇಗೆ ಹೂಡಿಕೆ ಮಾಡಬೇಕು ಎಂದು ಯೋಚಿಸುತ್ತೇನೆ. ನಾನು ಈ ಹಣದಿಂದ ಸೂಪರ್‌ಕಾರ್ ಖರೀದಿಸಿ ಐಷಾರಾಮಿ ರೆಸಾರ್ಟ್ ಅಥವಾ ಸೆವೆನ್ ಸ್ಟಾರ್ ಹೋಟೆಲ್‌ನಲ್ಲಿ ಆಚರಿಸಲು ಇಷ್ಟಪಡುತ್ತೇನೆ, ಹಾಗೂ ನನ್ನ ತಂದೆ ತಾಯಿಯನ್ನು ಯುಎಇಗೆ ಕರೆದುಕೊಂಡು ಬರಲು ಇಚ್ಚಿಸುತ್ತೇನೆ. ಅವರಿಗೆ ಸಣ್ಣ ಪುಟ್ಟ ಆಸೆಗಳಿವೆ ನಾನು ಅವನ್ನು ಪೂರೈಸಿ ಅವರೊಂದಿಗೆ ಜೀವನವನ್ನು ಆನಂದದಿಂದ ಜೀವಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.ಇದೇ ವೇಳೆ ತಮಗೆ ಲಾಟರಿ ನೀಡಿದ ಸಂಸ್ಥಗೆ ಹೃತ್ಪೂರ್ವಕ ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ಯುಎಇ ಲಾಟರಿಯ ವಾಣಿಜ್ಯ ಗೇಮಿಂಗ್ ನಿರ್ದೇಶಕ ಸ್ಕಾಟ್ ಬರ್ಟನ್ ಮಾತನಾಡಿ “ಮೊದಲನೆಯದಾಗಿ, ಈ ಅದ್ಭುತ ಗೆಲುವಿಗಾಗಿ ಅನಿಲ್‌ಕುಮಾರ್‌ಗೆ ಅಭಿನಂದನೆಗಳು, 100 ಮಿಲಿಯನ್ ದಿರಾಮ್ ಬಹುಮಾನವು ಅವರ ಜೀವನವನ್ನು ಬದಲಾಯಿಸುವುದಲ್ಲದೆ, ಯುಎಇ ಲಾಟರಿಗೆ ಒಂದು ಗಮನಾರ್ಹ ಮೈಲಿಗಲ್ಲನ್ನು ಸೂಚಿಸುತ್ತದೆ. ನಿಯಂತ್ರಿತ, ರೋಮಾಂಚಕಾರಿ ಮತ್ತು ಮೋಜಿನ ಲಾಟರಿ ಅನುಭವಗಳನ್ನು ನೀಡುವಾಗ ಜನರ ಜೀವನವನ್ನು ಉನ್ನತೀಕರಿಸುವ ನಮ್ಮ ಧ್ಯೇಯವನ್ನು ಬಲಪಡಿಸುತ್ತದೆ” ಎಂದು ತಿಳಿಸಿದ್ದಾರೆ.
ಇನ್ನು, ಲಾಟರಿ ಎಂದ ತಕ್ಷಣ ಎಲ್ಲರಿಗೂ ಇದರಲ್ಲಿ ಎಷ್ಟು ತೆರಿಗೆ ಕಡಿತವಾಗಬಹುದು ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಯುಎಇಯಲ್ಲಿ ತೆರಿಗೆ ರಹಿತ ಲಾಟರಿ ವ್ಯವಸ್ಥಯಿದ್ದು, ಅನಿಲ್ ಕುಮಾರ್ ಬೊಲ್ಲಾ ಪಡೆದಿರುವ 100 ಮಿಲಿಯನ್ ದಿರಾಮ್ ಹಣವನ್ನು ಸಂಪೂರ್ಣವಾಗಿದೆ ಅವರೇ ಮನೆಗೆ ತೆಗೆದುಕೊಂಡು ಹೋಗಬಹುದಾಗಿದೆ. ಅಲ್ಲದೇ ತಮ್ಮ ತಂದೆ ತಾಯಿಯನ್ನು ದುಬೈಗೆ ಕರೆದೊಯ್ದು ಅಲ್ಲಿ ಅವರೊಂದಿಗೆ ಇಡೀ ಜೀವನವನ್ನು ಆನಂದದಿಂದ ಜೀವಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ.























