ಕುಕ್ಕೆ ಸುಬ್ರಮಣ್ಯ:ಮದುವೆ ಸಂಭ್ರಮಕ್ಕೆ ಆಗಮಿಸುತ್ತಿದ್ದವರ ಸಂಚಾರ ದುಃಖದಲ್ಲಿ ಅಂತ್ಯಗೊಂಡ ಘಟನೆ ಇಂದು ಮುಂಜಾನೆ ಬಿಸ್ಲೆಘಾಟ್‌ನಲ್ಲಿ ನಡೆದಿದೆ. ಮದುವೆಗೆಂದು ಕುಕ್ಕೆ ಸುಬ್ರಮಣ್ಯದತ್ತ ತೆರಳುತ್ತಿದ್ದ ಟೆಂಪೋ ವಾಹನವು ಬಿಸ್ಲೆಘಾಟ್ ತಿರುವಿನಲ್ಲಿ ಸುಮಾರು 25 ಅಡಿ ಆಳಕ್ಕೆ ಉರುಳಿ ಬಿದ್ದ ಪರಿಣಾಮ, 22 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದ ನಂತರ ಸ್ಥಳೀಯರು ಮತ್ತು ಪೊಲೀಸ್ ಸಿಬ್ಬಂದಿ ಶೀಘ್ರವಾಗಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ಪ್ರಥಮ ಚಿಕಿತ್ಸೆಗಾಗಿ ಕುಕ್ಕೆ ಸುಬ್ರಮಣ್ಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ, ಅಲ್ಲಿ ಚಿಕಿತ್ಸೆ ಪಡೆದವರಲ್ಲಿ ಸ್ಥಿತಿ ಗಂಭೀರವಾಗಿದ್ದವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆ ಹಾಗೂ ಪುುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಅಪಘಾತದ ನಿಖರ ಕಾರಣ ತಿಳಿದುಬಂದಿಲ್ಲದಿದ್ದರೂ, ಬಿಸ್ಲೆಘಾಟ್ ತಿರುವಿನ ತೀವ್ರ ಇಳಿಜಾರಿನಿಂದ ವಾಹನದ ನಿಯಂತ್ರಣ ತಪ್ಪಿರುವ ಸಾಧ್ಯತೆ ವ್ಯಕ್ತವಾಗಿದೆ.






















