ಪುತ್ತೂರು: ಮಂಗಳೂರು ಚಾಲಿ ಅಡಕೆ ಮಂಗಳವಾರ ಕೆ.ಜಿಗೆ 520 ರೂ.ಗೆ ಖರೀದಿಯಾಗಿದೆ. ಕಳೆದ ವಾರ 500 ರೂ. ಗಡಿ ತಲುಪಿತ್ತು. ಮುಂದಿನ ದಿನಗಳಲ್ಲಿ ಸಿಂಗಲ್ ಚೋಲ್ ಅಡಕೆಗೆ ಕ್ಯಾಂಪ್ಕೊ 520 ರೂ. ನಿಗದಿ ಮಾಡಿದ ಬೆನ್ನಲ್ಲೇ ಕೆಲವು ಖಾಸಗಿ ವ್ಯಾಪಾರಸ್ಥರು ದರವನ್ನು ಕೊಂಚ ಏರಿಸಿದ್ದಾರೆ. ಕಳೆದ ವರ್ಷ ಈ ಸಮಯದಲ್ಲಿ ಸಿಂಗಲ್ ಚೋಲ್‌ಗೆ 480 ರೂ. ದರವಿತ್ತು. ಕರಿಕೋಕ ಅಡಕೆಗೆ ಕಳೆದ ವರ್ಷ ಬೇಡಿಕೆ ಇಲ್ಲದ ಕಾರಣ ಈ ಸಮಯಕ್ಕೆ ಕೆ.ಜಿಗೆ 70 ರೂ. ದರವಿತ್ತು. ಈ ಬಾರಿ 230 ರೂ. ದರವಿದೆ.
ಉತ್ತರ ಭಾರತದಲ್ಲಿ ಅಡಕೆ ಬೇಡಿಕೆ ಹೆಚ್ಚುತ್ತಿದ್ದರೂ ಅಡಕೆ ಕಡಿಮೆ ಇರುವ ಕಾರಣ ಧಾರಣೆ ಜಿಗಿದಿದೆ ಎಂದು ವಿಶ್ಲೇಷಿಸಲಾಗಿದೆ. ಇದೇ ವೇಳೆ ಈ ಸಾಲಿನ ಅಡಕೆ ಮಾರುಕಟ್ಟೆಗೆ ಆವಕವಾಗುತ್ತಿದ್ದು, ಇದು ಕೆ.ಜಿಗೆ 380 ರೂ.ಗೆ ಖರೀದಿಯಾಗುತ್ತಿದೆ. ಕಳೆದ ವಾರ ಇದರ ದರ 360 ರೂ. ಇತ್ತು.
ಕಳೆದ ಸಾಲಿನಲ್ಲಿ ಅಡಕೆ ಇಳುವರಿ ಕಡಿಮೆಯಿದ್ದು, ಕೊಳೆರೋಗವೂ ಬಾಧಿಸಿತ್ತು. ಸಣ್ಣ ರೈತರು ಜೂನ್ ವೇಳೆ ಮಾರಾಟ ಮಾಡಿದ್ದರೆ, ದೊಡ್ಡ ರೈತರು ಮಾತ್ರ ದಾಸ್ತಾನು ಇರಿಸಿಕೊಂಡಿದ್ದಾರೆ.
ಪ್ರಸ್ತುತ ಸಾಲಿನಲ್ಲೂ ವ್ಯಾಪಕ ಕೊಳೆರೋಗವಿದ್ದು, ಮಳೆಗಾಲದಲ್ಲಿ ಅರ್ಧಕ್ಕರ್ಧ ಅಡಕೆ ಎಳತಿನಲ್ಲೇ ಮರದಿಂದ ಉದುರಿವೆ. ಹೀಗಾಗಿ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಫಸಲು ನಷ್ಟವಾಗು ಸಾಧ್ಯತೆ ಇದೆ. ಅಡಕೆ ಫಸಲು ಕಡಿಮೆ ಇದ್ದು, ಉತ್ಪಾದನಾ ವೆಚ್ಚ ಅಧಿಕವಿದೆ. ದರ ಏರಿಕೆಯಾದಲ್ಲಿ ಮಾತ್ರ ಕೃಷಿಕರಿಗೆ ಅನುಕೂಲವಾಗುತ್ತದೆ



 
                                









 
			









