ಪುತ್ತೂರು:ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ನೀಡಲಾಗುವ 2025-26ನೇ ಸಾಲಿನ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರೀಯ ಕಬಡ್ಡಿ ತರಬೇತುದಾರ, ಉತ್ತಮ ಕಾರ್ಯಕ್ರಮ ನಿರೂಪಕರಾಗಿರುವ ದರ್ಬೆ ಲಿಟ್ಲ್ ಫ್ಲವರ್ ಶಾಲಾ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಅವರು 2025ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ಕಬಡ್ಡಿ ತರಬೇತುದಾರ, ಉತ್ತಮ ಕಾರ್ಯಕ್ರಮ ನಿರೂಪಕರಾಗಿರುವ ದರ್ಬೆ ಲಿಟ್ಲ್ ಫ್ಲವರ್ ಶಾಲಾ ಸಹ ಶಿಕ್ಷಕ ಬಾಲಕೃಷ್ಣ ರೈ ಪೋರ್ದಾಲ್ ಬೆಟ್ಟಂಪಾಡಿ ಗ್ರಾಮದ ಪೊರ್ದಾಲ್ ನಿವಾಸಿ ಕಿಟ್ಟಣ್ಣ ರೈ ಪೊರ್ದಾಲ್ ಮತ್ತು ಗುಲಾಬಿ ದಂಪತಿಗಳ ಸುಪುತ್ರ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಡ್ಕ ನವೋದಯ ಪ್ರೌಢಶಾಲೆ ಬೆಟ್ಟಂಪಾಡಿಯಲ್ಲಿ ಪ್ರೌಢಶಿಕ್ಷಣ, ಸರಕಾರಿ ಪದವಿ ಪೂರ್ವ ಕಾಲೇಜು ಬೆಟ್ಟಂಪಾಡಿಯಲ್ಲಿ ಪದವಿ ಪೂರ್ವ ಶಿಕ್ಷಣ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯಲ್ಲಿ ಪದವಿ ಶಿಕ್ಷಣ, ವಿವೇಕಾನಂದ ಟೀಚರ್ ಟ್ರೈನಿಂಗ್ ಇನ್ಸಿಟ್ಯೂಟ್ ತೆಂಕಿಲದಲ್ಲಿ ಡಿ.ಎಡ್. ಧಾರವಾಡ ವಿಶ್ವವಿದ್ಯಾನಿಲಯದಲ್ಲಿ ಬಿ.ಎಡ್ ಪದವಿ ಹಾಗೂ ಎಂ.ಎ ಪದವಿಯನ್ನು ಪಡೆದಿದ್ದಾರೆ.
ಬಾಲ್ಯದಲ್ಲಿಯೇ ಪ್ರತಿಭಾವಂತ ವಿದ್ಯಾರ್ಥಿಯಾಗಿ, ಕ್ರೀಡಾಪಟುವಾಗಿ, ಶಾಲೆ, ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕಲಿಕೆ, ಆಟ, ಪಾಠ, ನಾಯಕತ್ವ ವಿಭಾಗದಲ್ಲೂ ಮುಂಚೂಣಿಯಲ್ಲಿದ್ದ ಇವರು ರಂಗಕಲಾವಿದರಾಗಿ, ನಾಟಕ ರಂಗದಲ್ಲೂ ತನ್ನನ್ನು ತೊಡಗಿಸಿ, 2009ರಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ 17 ವರ್ಷಗಳಿಂದ ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆಯಲ್ಲಿ ಸಹ ಶಿಕ್ಷಕರಾಗಿರುತ್ತಾರೆ.
1000ಕ್ಕಿಂತ ಅಧಿಕ ಕಾರ್ಯಕ್ರಮದ ನಿರೂಪಣೆ, ಸಾಮಾನ್ಯ ಕಾರ್ಯಕ್ರಮದಿಂದ ಹಿಡಿದು ಮಾನ್ಯ ಮುಖ್ಯಮಂತ್ರಿಗಳ ವರೆಗಿನ ಕಾರ್ಯಕ್ರಮದ ನಿರೂಪಣೆ. ಡ್ರಗ್ಸ್ ಮುಕ್ತ ಯುವ ಸಮಾಜ ಎನ್ನುವ ವಿಷಯದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ 250ಕ್ಕಿಂತ ಅಧಿಕ ಶಾಲಾ-ಕಾಲೇಜುಗಳಲ್ಲಿ ತರಬೇತಿ, ರಾಷ್ಟ್ರಮಟ್ಟದ ಕಬಡ್ಡಿ ತರಬೇತುದಾರರಾಗಿ ಇವರ ತರಬೇತಿಯಲ್ಲಿ 8 ಬಾರಿ ಜಿಲ್ಲಾಮಟ್ಟ, 5 ಬಾರಿ ವಿಭಾಗಮಟ್ಟ, 5 ಬಾರಿ ರಾಜ್ಯಮಟ್ಟ, ಸತತ ಮೂರನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಸತತ 3 ಬಾರಿ ಕರ್ನಾಟಕ ಕಬಡ್ಡಿ ತಂಡದ ತರಬೇತುದಾರರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆ, 10ಕ್ಕಿಂತ ಅಧಿಕ ಮಕ್ಕಳು ಅಥ್ಲೆಟಿಕ್ ವಿಭಾಗದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆ ತ್ರೋಬಾಲ್ ಪಂದ್ಯಾಟದಲ್ಲಿ ಸತತ 4 ಬಾರಿ ಜಿಲ್ಲಾಮಟ್ಟಕ್ಕೆ ಆಯ್ಕೆ, ದ.ಕ ಜಿಲ್ಲಾಮಟ್ಟದ 14ರ ವಯೋಮಾನದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟದ ಸಂಘಟನೆ, ಪುತ್ತೂರು ತಾಲೂಕು ಮಟ್ಟದ 14ರ ವಯೋಮಾನದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟದ ಸಂಘಟನೆ, ರೋಟರಿ ಕ್ಲಬ್/ಲಯನ್ಸ್ ಕ್ಲಬ್‌ಗಳಲ್ಲಿ ಸೇವೆ, ಭಾರತ್ ಸೈಟ್ ಗೈಡ್ ಸಂಸ್ಥೆಯಲ್ಲಿ ಉತ್ತಮ ಸ್ಕೌಟರ್ ಆಗಿ ಸೇವೆ, 50 ಕ್ಕಿಂತ ಅಧಿಕ ಸಂಘ-ಸಂಸ್ಥೆಗಳಿಂದ ಸನ್ಮಾನ, ಗೌರವಗಳಿಗೆ ಭಾಜನರಾಗಿರುತ್ತಾರೆ.
ವೃತ್ತಿಯಲ್ಲಿ ಶಿಕ್ಷಕ, ಪ್ರವೃತ್ತಿಯಲ್ಲಿ ಕಾಠ್ಯಕ್ರಮದ ನಿರೂಪಕ, ಅತ್ಯುತ್ತಮ ಸಂಘಟಕ, ಪ್ರಖರ ವಾಗ್ಮಿ ಹಲವು ವಿಷಯಗಳಲ್ಲಿ ಸಂಪನ್ಮೂಲ ವ್ಯಕ್ತಿ, ಸರಕಾರಿ ಕಾಠ್ಯಕ್ರಮದ ನಿರೂಪಕ, ಕವಿ, ಸಾಹಿತಿ, ನಟ, ನಿರ್ದೇಶಕ, ರಾಷ್ಟ್ರಮಟ್ಟದ ಕಬಡ್ಡಿ ತರಬೇತುದಾರ, ಸ್ವತಃ ಅತ್ಯುತ್ತಮ ಕಬಡ್ಡಿ, ಕ್ರಿಕೆಟ್, ಫುಟ್‌ಬಾಲ್ ಆಟಗಾರ ಹೀಗೆ ಬಹುಮುಖ ಪ್ರತಿಭೆಯ ವ್ಯಕ್ತಿತ್ವ ಬಾಲಕೃಷ್ಣ ರೈ ಪೊರ್ದಾಲ್ ಅವರದು.























