ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನ್ಯೂಯಾರ್ಕ್‌ನ ಮೊದಲ ಮುಸ್ಲಿಂ ಮೇಯರ್, ಭಾರತೀಯ ಮೂಲದ ಜೊಹ್ರಾನ್ ಮಮ್ದಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಆತನ ಹೆಸರು ಏನೇ ಇರಲಿ, ನ.4ರ ಚುನಾವಣೆ ಬಳಿಕ ಅಮೆರಿಕನ್ನರು ಕಮ್ಯುನಿಸಂ ಮತ್ತು ಕಾಮನ್‌ಸೆನ್ಸ್(ಸಾಮಾನ್ಯ ತಿಳಿವಳಿಕೆ) ನಡುವಿನ ಕಠಿಣ ಆಯ್ಕೆಯನ್ನು ಎದುರಿಸಬೇಕಿದೆ ಎಂದು ತಿಳಿಸಿದ್ದಾರೆ.
ಫ್ಲೋರಿಡಾದ ಮಿಯಾಮಿಯಲ್ಲಿ ಅಮೆರಿಕದ ಬ್ಯುಸಿನೆಸ್ ಫೋರಂನಲ್ಲಿ ಮಾತನಾಡಿದ ಅವರು, ನಾನು ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾದಾಗ ಅಮೆರಿಕನ್ನರು ತಮ್ಮ ಸಾರ್ವಭೌಮತ್ವವನ್ನು ಮರುಸ್ಥಾಪಿಸಿದ್ದರು. ನ್ಯೂಯಾರ್ಕ್ ಮೇಯರ್ ಚುನಾವಣೆ ಬಳಿಕ ಅದನ್ನು ಇದೀಗ ಕೊಂಚ ಮಟ್ಟಿಗೆ ಕಳೆದುಕೊಂಡಿದ್ದಾರೆ ಎಂದರು.
ಆದರೆ, ನಾವು ಅದನ್ನು ನೋಡಿಕೊಳ್ಳುತ್ತೇವೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನ್ಯೂಯಾರ್ಕ್‌ನಲ್ಲಿ ಏನೇನು ಆಗಲಿದೆ ಎಂಬುದನ್ನು ಕಾದು ನೋಡಿ. ಅದು ಭಯಾನಕವಾಗಿರಲಿದೆ… ಆ ರೀತಿ ಆಗಬಾರದು ಎಂಬುದು ನನ್ನ ಬಯಕೆ. ಆದರೂ ನೀವು ಅದನ್ನು ನೋಡಲಿದ್ದೀರಿ ಎಂದು ಎಚ್ಚರಿಸಿದರು.
ಜೊಹ್ರಾನ್ ಮಮ್ದಾನಿ ಅವರನ್ನು ಕಮ್ಯುನಿಸ್ಟ್ ಎಂದು ಕರೆದಿರುವ ಟ್ರಂಪ್, ಅಮೆರಿಕದಲ್ಲಿ ಡೆಮಾಕ್ರಟಿಕ್ ಪಕ್ಷದವರು ಏನು ಮಾಡಬಯಸುತ್ತಾರೆ ಎಂಬುದಕ್ಕೆ ನ್ಯೂಯಾರ್ಕ್ ಚುನಾವಣೆಯೇ ಸಾಕ್ಷಿ. ದೇಶದ ಅತಿದೊಡ್ಡ ನಗರದಲ್ಲಿ ಡೆಮಾಕ್ರಟಿಕ್ ಪಕ್ಷವು ಕಮ್ಯುನಿಸ್ಟ್ ಮೇಯರ್‌ನನ್ನು ತಂದು ಕೂರಿಸಿದೆ. ನನ್ನ ವಿರೋಧಿಗಳು ಅಮೆರಿಕವನ್ನು ಕಮ್ಯುನಿಸ್ಟ್ ಕ್ಯೂಬಾ, ಸಮಾಜವಾದಿ ವೆನುಜುವೆಲಾ ಮಾಡಲು ಬಯಸುತ್ತಿದ್ದಾರೆ. ಆ ದೇಶಗಳಲ್ಲಿ ಏನಾಗಿದೆ ಎಂಬುದನ್ನು ನೀವು ಈಗಾಗಲೇ ನೋಡಿದ್ದೀರಿ ಎಂದರು.
ಗ್ಯಾರಂಟಿ ಕೊಡುಗೆಗಳ ಘೋಷಣೆ
ವಿಶ್ವದ ಬಂಡವಾಳಶಾಹಿಗಳ ರಾಜಧಾನಿಯಾದ ಅಮೆರಿಕದ ನ್ಯೂಯಾರ್ಕ್‌ನ ಹೃದಯ ಭಾಗದಲ್ಲಿ ಈ ವಾರ ದೊಡ್ಡದೊಂದು ಕಂಪನವೇ ಸಂಭವಿಸಿತು. ಡೆಮಾಕ್ರೆಟ್ ಪಕ್ಷದ ಸೋಷಿಯಲಿಸ್ಟ್ ನಾಯಕ, 34ರ ಹರೆಯದ ಜೊಹ್ರಾನ್ ಮಮ್ದಾನಿ, 2025ನೇ ಸಾಲಿನ ಮೇಯರ್ ಚುನಾವಣೆಯನ್ನು ತಮ್ಮ ಭರ್ಜರಿ ಗ್ಯಾರಂಟಿ ಕೊಡುಗೆಗಳ ಘೋಷಣೆ ಮೂಲಕ ಗೆದ್ದುಕೊಂಡರು. ಅದರಲ್ಲಿ ಉಚಿತ ಸಾರ್ವಜನಿಕ ಸಾರಿಗೆ, ಬಾಡಿಗೆ ಏರಿಕೆಗೆ ಕಡಿವಾಣ, ಸಾರ್ವತ್ರಿಕ ಶಿಶುಪಾಲನಾ ಭತ್ಯೆ ಮತ್ತಿತರೆ ಉಚಿತ ಘೋಷಣೆಗಳು ಸೇರಿದ್ದವು. ವಿಶೇಷವೆಂದರೆ ಈ ಎಲ್ಲಾ ಉಚಿತ ಕೊಡುಗೆಗಳು ಭಾರತದ ರಾಜಕೀಯದಲ್ಲಿ ಇತ್ತೀಚೆಗೆ ಹೊಸ ಟ್ರೆಂಡ್ ಆಗಿರುವ ಗ್ಯಾರಂಟಿ ಭಾಗ್ಯಗಳಿಂದಲೇ ನೇರವಾಗಿ ಸ್ಫೂರ್ತಿ ಪಡೆದಿದ್ದು! ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷಕ್ಕೆ ಅಧಿಕಾರ ನೀಡಿದ್ದರಿಂದ ಹಿಡಿದು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ತಂಡುಕೊಡುವಲ್ಲಿ ಯಶಸ್ವಿಯಾದ ಯೋಜನೆಗಳೇ ನ್ಯೂಯಾರ್ಕ್‌ನ ಮೇಯರ್ ಚುನಾವಣೆಯ ಭರವಸೆಗಳಿಗೂ ಪ್ರೇರೇಪಣೆ ನೀಡಿದ್ದವು.
ಭಾರತದ ರಾಜಕೀಯವನ್ನು ಬಹುಕಾಲದಿಂದಲೂ ಆವರಿಸಿಕೊಂಡು ಬಂದಿರುವ ಉಚಿತ ಕೊಡುಗೆಯ ಪರಿಪಾಠ ಇದೀಗ ಅಮೆರಿಕ ರಾಜಕೀಯ ವಲಯವನ್ನೂ ಪ್ರವೇಶ ಮಾಡಿದೆ. ಇದು, ಅಸಮಾನತೆಯ ಸಮಾಜದಲ್ಲಿ ರಾಜಕೀಯ ಪಕ್ಷಗಳು ಹೇಗೆ ಮತದಾರರನ್ನು ಸೆಳೆಯಬಹುದು ಎಂಬುದಕ್ಕೆ ಹೊಸ ಉದಾಹರಣೆಯಾಗಿ ಹೊರಹೊಮ್ಮಿದೆ.























