ಮೈಸೂರು: ಹಿರಿಯ ಬಿಜೆಪಿ ಮುಖಂಡ, ಚಾಮರಾಜನಗರ ಸಂಸದ ವಿ ಶ್ರೀನಿವಾಸ ಪ್ರಸಾದ್(76) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಏಪ್ರಿಲ್ 27ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು.
ಅವರಿಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ. ಇದೀಗ ಬೆೆಂಗಳೂರಿನಿಂದ ಮೈಸೂರಿಗೆ ಪಾರ್ಥಿವ ಶರೀರವನ್ನು ರವಾನೆ ಮಾಡಲಾಗಿದ್ದು ಜಯಲಕ್ಷ್ಮೀ ಪುರಂ ನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
1947ರ ಆಗಸ್ಟ್ 6ರಂದು ಮೈಸೂರಿನಲ್ಲಿ ಜನಿಸಿದ ವೆಂಕಟಯ್ಯ ಶ್ರೀನಿವಾಸ್ ಪ್ರಸಾದ್ ಅವರು ಮೈಸೂರು ಭಾಗದ ಪ್ರಮುಖ ದಲಿತ ನಾಯಕರಲ್ಲಿ ಒಬ್ಬರಾಗಿದ್ದರು. 1974ರಲ್ಲಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಅವರು 1980ರಲ್ಲಿ ಮೊದಲ ಬಾರಿಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸಂಸದರಾಗಿ ಲೋಕಸಭೆಗೆ ಕಾಲಿಟ್ಟರು. 1984, 1989, 1991ರಲ್ಲೂ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದರು.
1999ರಿಂದ ಜೆಡಿಯು ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ 1999ರಿಂದ 2004ರವರೆಗೆಆಙಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಬಳಿಕ ಮತ್ತೆ ಕಾಂಗ್ರೆಸ್ ಸೇರಿದ ಅವರು 2008ರಲ್ಲಿ ಮತ್ತು 2013ರಲ್ಲಿ ಕಾಂಗ್ರೆಸ್ ನಿಂದ ನಂಜನಗೂಡು ಸಂಸದರಾಗಿ ಆಯ್ಕೆಯಾಗಿದ್ದರು. 2013ರಿಂದ 2016ರವರೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ರಾಜ್ಯ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
2016ರಲ್ಲಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟದಿಂದ ತೆಗೆದಾಗ ಮುನಿಸಿಕೊಂಡು ಬಿಜೆಪಿ ಸೇರಿದ್ದರು. 2019ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿದು ಕಾಂಗ್ರೆಸ್ ನ ಆರ್ ಧ್ರುವನಾರಾಯಣ್ ಅವರನ್ನು ಸೋಲಿಸಿದ್ದರು.