ಸೋಮವಾರ ಸಂಜೆ 6.52 ಕ್ಕೆ ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ರ ಬಳಿ ಕಾರ್ ಬಾಂಬ್ ಸ್ಫೋಟಗೊಂಡಿದೆ. ಇಬ್ಬರು ಮಹಿಳೆಯರು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. 24 ಜನರು ಗಾಯಗೊಂಡಿದ್ದಾರೆ. ಸ್ಫೋಟದ ಸಿಸಿಟಿವಿ ದೃಶ್ಯಾವಳಿಗಳು ಬಿಡುಗಡೆಯಾಗಿವೆ. ಅದರಲ್ಲಿ, ಬಿಳಿ ಬಣ್ಣದ ಐ20 ಕಾರು ಪಾರ್ಕಿಂಗ್ ಸ್ಥಳದಿಂದ ಹೊರಹೋಗುತ್ತಿರುವುದು ಕಂಡುಬಂದಿದೆ. ಅದು ಫರಿದಾಬಾದ್ ಭಯೋತ್ಪಾದಕ ಗುಂಪಿನ ಸದಸ್ಯ ಡಾ. ಮೊಹಮ್ಮದ್ ಉಮರ್ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಕಪ್ಪು ಮುಖವಾಡ ಧರಿಸಿದ ವ್ಯಕ್ತಿಯೊಬ್ಬರು ಕಾರಿನಲ್ಲಿ ಕುಳಿತಿರುವುದು ಕಂಡುಬರುತ್ತದೆ. ಪೊಲೀಸ್ ಮೂಲಗಳ ಪ್ರಕಾರ, ಆತನೇ ಭಯೋತ್ಪಾದಕ ಡಾ. ಉಮರ್ ಎಂದು ಹೇಳಲಾಗಿದೆ. ಸ್ಫೋಟಕ್ಕೆ ಸುಮಾರು ಎರಡೂವರೆ ಗಂಟೆಗಳ ಮೊದಲು, ಅಂದರೆ ಮಧ್ಯಾಹ್ನ 3:19 ರಿಂದ ಸಂಜೆ 6:48 ರವರೆಗೆ, ಅದೇ ಕಾರು ಪಾರ್ಕಿಂಗ್ ಸ್ಥಳದಲ್ಲಿ ನಿಂತಿತ್ತು. ಉಮರ್ ಕಾರಿನಲ್ಲಿಯೇ ಕುಳಿತಿದ್ದು, ಹೊರಗೆ ಬರಲಿಲ್ಲ. ಯಾರಿಗಾದರು ಕಾಯುತ್ತಿದ್ದನೇ ಅಥವಾ ದಾಳಿಗೆ ತಯಾರಿ ನಡೆಸುತ್ತಿದ್ದನೇ? ಎಂಬುವ ಕುರಿತು ತಿಳಿದು ಬರಬೇಕಿದೆ.
ಈ ಸ್ಫೋಟವು ಫರಿದಾಬಾದ್ ಗುಂಪಿನೊಂದಿಗೆ ಸಂಬಂಧ ಹೊಂದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಇತ್ತೀಚೆಗೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಫರಿದಾಬಾದ್ ಮತ್ತು ಲಕ್ನೋದಲ್ಲಿ ನಡೆಸಿದ ದಾಳಿಗಳಲ್ಲಿ 2900 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡರು. ಈ ಕಾರ್ಯಾಚರಣೆಯಲ್ಲಿ, ಡಾ. ಮುಜಮ್ಮಿಲ್ ಶಕೀಲ್ ಮತ್ತು ಮಹಿಳಾ ವೈದ್ಯೆ ಶಾಹೀನ್ ಶಾಹಿದ್ ಅವರನ್ನು ಬಂಧಿಸಲಾಯಿತು. ಅವರ ಬಂಧನದ ನಂತರ ದಾಳಿಯನ್ನು ತರಾತುರಿಯಲ್ಲಿ ನಡೆಸಿರಬಹುದು ಎಂಬ ಕುರಿತು ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ..
ದೆಹಲಿ ಪೊಲೀಸರು ಯುಎಪಿಎ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳದಲ್ಲಿ ಆರ್‌ಡಿಎಕ್ಸ್‌ನ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ, ಆದರೆ ಆತ್ಮಹತ್ಯಾ ದಾಳಿಯ ದೃಷ್ಟಿಕೋನದಿಂದ ತನಿಖೆ ಮುಂದುವರೆದಿದೆ. ಸ್ಫೋಟದ ನಂತರ, ದೆಹಲಿ ಪೊಲೀಸರು ಪಹರ್‌ಗಂಜ್, ದರಿಯಾಗಂಜ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಹೋಟೆಲ್‌ಗಳಲ್ಲಿ ರಾತ್ರಿಯಿಡೀ ಶೋಧ ನಡೆಸಿದರು.
ಸ್ಫೋಟದ ನಂತರ ಜನರು ಭಯಭೀತರಾಗಿ ಓಡುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ಭದ್ರತಾ ಮತ್ತು ವೈದ್ಯಕೀಯ ತಂಡಗಳು ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ತಮ್ಮ ನಾಗರಿಕರಿಗೆ ಕೆಂಪು ಕೋಟೆ ಹಾಗೂ ಜನದಟ್ಟಣೆ ಇರುವ ಸ್ಥಳಗಳಿಂದ ದೂರವಿರಲು ಸೂಚಿಸಿವೆ.
ಅಷ್ಟೇ ಅಲ್ಲದೆ, ಈಗಾಗಲೇ ಅಧಿಕಾರಿಗಳು ಅಪರಾಧಿಯ ಕುಟುಂಬವನ್ನು ಬಂಧಿಸಿದ್ದಾರೆ. ಈ ಮಧ್ಯೆ, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ವಾಸಿಸುತ್ತಿದ್ದ ವೈದ್ಯ ಉಮರ್ ಅವರ ತಾಯಿ ಮತ್ತು ಸಹೋದರನನ್ನು ಅಧಿಕಾರಿಗಳು ವಶಕ್ಕೆ ಪಡೆದು ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿದ್ದಾರೆ.























