ಪುತ್ತೂರು: ಭಾರತ ದೇಶದ ವಿಭಿನ್ನ ವೈಭವವನ್ನು ಪರಿಚಯಿಸುವ ಆಳ್ವಾಸ್ ನುಡಿಸಿರಿ ವಿರಾಸತ್‌ನಿಂದ ನ.16ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವಕ್ಕೆ ನಿರೀಕ್ಷೆಗೂ ಮೀರಿ ಜನಸಾಗರ ಆಗುವ ಸಾಧ್ಯತೆ ಇದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವರ ಅಭಿಮಾನಿ, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಆಳ್ವಾಸ್‌ನಿಂದ ರಾಜ್ಯದ ದೊಡ್ಡ ಕಾರ್ಯಕ್ರಮ ಪುತ್ತೂರಿನಲ್ಲಿ ನಡೆಯುತ್ತಿದೆ. 10 ವರ್ಷಗಳ ಹಿಂದೆ ಪುತ್ತೂರಿನ ಸುದಾನದಲ್ಲಿ ಎರಡು ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿತ್ತು. ಇದೀಗ 10 ವರ್ಷದ ಬಳಿಕ ಮತ್ತೆ ಸಾಂಸ್ಕೃತಿಕ ವೈಭವ ಪುತ್ತೂರಿನಲ್ಲಿ ನಡೆಯುತ್ತಿದೆ. ಬಹಳ ಕಡೆ ಆಳ್ವಾಸ್ ಕಾರ್ಯಕ್ರಮಕ್ಕೆ ಬೇಡಿಕೆ ಇದೆ. ಆದರೆ ಮೋಹನ್ ಆಳ್ವ ಅವರು ಪುತ್ತೂರಿನ ಅಭಿಮಾನದಿಂದ ಈ ಕಾರ್ಯಕ್ರಮ ಮಾಡುತ್ತಿದ್ದಾರೆ. ಜಾತಿ, ಧರ್ಮ ಮೀರಿ ಈ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಿರೀಕ್ಷಗೂ ಮೀರಿ ಜನಸಂಖ್ಯೆ ಬರುವ ಸಾಧ್ಯತೆ ಇದೆ. ಎಲ್ಲಾ ಶಾಲೆಗಳ ವಿವಿಧ ರಾಜ್ಯಗಳ ಸಾಂಸ್ಕೃತಿಕ ಮೆರುಗನ್ನು ನೋಡಲು ಮಕ್ಕಳಿಗೆ ಇದೊಂದು ಸುವರ್ಣವಕಾಶ ಎಂದವರು ಆಳ್ವಾಸ್ ಶಿಕ್ಷಣ ಸಂಸ್ಥೆಯ ಸುಮಾರು 350ಕ್ಕೂ ಹೆಚ್ಚಿನ ಮಕ್ಕಳು ಕಾರ್ಯಕ್ರಮ ನೀಡಲಿದ್ದಾರೆ ಎಂದವರು ಹೇಳಿದರು.
ಸಂಸ್ಥೆಯ ಪ್ರೊ. ಉಷಾ ಅವರು ಮಾತನಾಡಿ, ಪ್ರತಿ ಮನೆ ಮನೆಯಲ್ಲೂ ಬಾತೃತ್ವವನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯುತ್ತದೆ ಎಂದರು. ಮೋಹನ್ ಆಳ್ವ ಅವರ ಅಭಿಮಾನಿ ದಂಬೆಕಾನ ಸದಾಶಿವ ರೈ ಅವರು ಮಾತನಾಡಿ, ಎಲ್ಲರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಪತ್ರಿಕಾಗೋಷ್ಟಿಯಲ್ಲಿ ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.
ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯುವ ಆಳ್ವಾಸ್ ನುಡಿಸಿರಿ ವಿರಾಸತ್ ಪುತ್ತೂರು ಘಟಕದ ವತಿಯಿಂದ ನಡೆಸಲ್ಪಡುವ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಕರ್ನಾಟಕದ ಶಿಕ್ಷಣ ಹಾಗೂ ಸಾಂಸ್ಕೃತಿಕ ರಾಯಭಾರಿ ಎಂದೇ ಕರೆಯಲ್ಪಡುವ ಡಾ. ಮೋಹನ್ ಆಳ್ವ ಅವರು ಸರ್ವರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿದ್ದಾರೆ























