ಅಹಮದಾಬಾದ್: ಗುಜರಾತ್ ಟೈಟನ್ಸ್ ನ ಬೌಲರ್ ಗಳನ್ನು ಚೆಂಡಾಡಿದ ಆರ್ ಸಿಬಿ ತಂಡದ ಯುವ ಆಲ್ ರೌಂಡರ್ ವಿಲ್ ಜ್ಯಾಕ್ಸ್ 41 ಎಸೆತಗಳಲ್ಲೇ ಚೊಚ್ಚಲ ಐಪಿಎಲ್ ಶತಕ ಸಿಡಿಸುವ ಮೂಲಕ 16 ಓವರ್ ಗಳಲ್ಲೇ 205 ರನ್ ಗಳ ಗಡಿ ತಲುಪಿದ ಆರ್ ಸಿಬಿಗೆ ಗೆಲುವಿನ ಮಾಲೆ ತೊಡಿಸಿದ್ದಾರೆ. ಮತ್ತೊಂದು ತುದಿಯಲ್ಲಿ ಮೂಕವಿಸ್ಮಿತರಾಗಿ ವಿಲ್ ಜ್ಯಾಕ್ಸ್ ಆವರ ಆಟವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ವಿರಾಟ್ ಕೊಹ್ಲಿ ಕೂಡ ಅಜೇಯ 70 ರನ್ ಸಿಡಿಸಿ ತಮ್ಮ ಸ್ಟ್ರೆಕ್ ರೇಟ್ ಟೀಕಿಸುವವರಿಗೆ ತಕ್ಕ ಉತ್ತರ ನೀಡಿದ್ದಾರೆ.
ಶುಭಮನ್ ಗಿಲ್ ಸಾರಥ್ಯದ ಗುಜರಾತ್ ಟೈಟನ್ಸ್ ವಿರುದ್ಧ 9 ವಿಕೆಟ್ ಗಳ ಗೆಲುವು ಸಾಧಿಸಿದ ನಂತರ ಆರ್ ಸಿಬಿ ಡ್ರೆಸಿಂಗ್ ರೂಮ್ ನಲ್ಲಿ ನಾಯಕ ಫಾಫ್ ಡುಪ್ಲೆಸಿಸ್ ಸೇರಿದಂತೆ ತಂಡದ ಇತರ ಎಲ್ಲಾ ಆಟಗಾರರು ವಿಲ್ ಜ್ಯಾಕ್ಸ್ ಗೆ ಆತ್ಮೀಯವಾಗಿ ಗೌರವ ಸಲ್ಲಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
“ನೀನು ಪಂದ್ಯದಲ್ಲಿ ನಂತರದ 50 ರನ್ ಗಳನ್ನು ಕೇವಲ 10 ಎಸೆತಗಳಲ್ಲಿ ಪೂರೈಸಿದ್ದೀಯಾ. 31 ಎಸೆತದಲ್ಲಿ 50 ರನ್ ಗಳಿಸಿದ್ದ ನೀನು, ಒಟ್ಟಾರೆ 41 ಎಸೆತಗಳಲ್ಲಿ ಶತಕ ಸಿಡಿಸಿದ್ದೀಯಾ. ಎರಡನೇ ಅವಧಿ ನಿಜಕ್ಕೂ ನಿನ್ನ ದಿನವಾಗಿತ್ತು. ನಿಜಕ್ಕೂ ನೀನು ಗಾಲ್ಫ್ ಆಟದಂತೆ ಆಡಿದ್ದೀಯಾ. ಪಂದ್ಯದಲ್ಲಿ ನಾನು ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿಲ್ಲ ಎಂದು ಕೋಪಗೊಂಡಿದ್ದೇನೆ. ಆದರೆ ನೀನು 94 ರನ್ ಗಳಿಸಿದ್ದಾಗ ಸಿಕ್ಸರ್ ಸಿಡಿಸಿದಾಗ ನಾನು ದೇವರಿಗೆ ಕೃತಜ್ಞತೆ ಸಲ್ಲಿಸಿದ್ದೆ,” ಎಂದು ಆರ್ ಸಿಬಿ ಮಾಜಿ ನಾಯಕ ಹೇಳಿದ್ದಾರೆ.
“ಪಂದ್ಯದ ಆರಂಭದಲ್ಲಿ ನಾನು ಸಂಕಷ್ಟಕ್ಕೆ ಸಿಲುಕಿ ರನ್ ಗಳಿಸಲು ಪರದಾಟ ನಡೆಸಿದ್ದೆ. ಆದರೆ ವಿರಾಟ್ ಕೊಹ್ಲಿ ಅವರು ನಿಯಮಿತವಾಗಿ ರನ್ ಗಳಿಸುತ್ತಿದ್ದರಿಂದ ನಾನು ಲಯ ಕಂಡುಕೊಳ್ಳಲು ಸಹಕಾರಿ ಆಯಿತು” ಎಂದು ವಿಲ್ ಜ್ಯಾಕ್ಸ್ ಹೇಳಿದ್ದಾರೆ.
ಗುಜರಾತ್ ಟೈಟನ್ಸ್ ವಿರುದ್ಧ 9 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿರುವ ಫಾಫ್ ಡುಪ್ಲೆಸಿಸ್ ಪಡೆ , ಮೇ 4 ರಂದು ತವರಿನ ಅಂಗಣವಾದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಶುಭಮನ್ ಗಿಲ್ ಸಾರಥ್ಯದ ಗುಜರಾತ್ ಟೈಟನ್ಸ್ ಪೈಪೋಟಿ ಎದುರಿಸಲಿದೆ.
2022ರ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ನೀಡಿದ 201 ರನ್‌ಗಳ ಗುರಿಯನ್ನು 16 ಓವರ್‌ಗಳಲ್ಲಿ 206 ರನ್ ಬಾರಿಸಿ ಮೆಟ್ಟಿನಿಂತ ಆರ್‌ಸಿಬಿ ಐಪಿಎಲ್ 2024 ಟೂರ್ನಿಯಲ್ಲಿ ತನ್ನ ಪ್ಲೇ-ಆಫ್ಸ್ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಿದೆ. ತನ್ನ ಪಾಲಿನ ಮುಂದಿನ ಎಲ್ಲ ಪಂದ್ಯಗಳನ್ನು ಆರ್‌ಸಿಬಿ ಗೆದ್ದರೆ ಪ್ಲೇ-ಆಫ್ಸ್ ತಲುಪುವ ಅಲ್ಪ ಅವಕಾಶ ಸಿಗಲಿದೆ. ಈ ನಿಟ್ಟಿನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ 9 ವಿಕೆಟ್‌ಗಳ ಗೆಲುವು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.