ಸೌದಿ ಅರೇಬಿಯಾ, ನವೆಂಬರ್ 17: ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ, ಡೀಸೆಲ್ ಟ್ಯಾಂಕರ್ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 42 ಮಂದಿ ಭಾರತೀಯರು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಈ 42 ಮಂದಿ ಮೆಕ್ಕಾದಿಂದ ಮದೀನಕ್ಕೆ ಹೋಗುತ್ತಿದ್ದರು, ಸೌದಿ ಅರೇಬಿಯಾದ ಮುಫರಿಹತ್ ಬಳಿ ಈ ದುರಂತ ಸಂಭವಿಸಿದೆ. ಮೃತರೆಲ್ಲರೂ ತೆಲಂಗಾಣ ಮೂಲದವರು ಎನ್ನುವ ಮಾಹಿತಿ ಲಭ್ಯವಾಗಿದೆ.
ಬಸ್ ಮೆಕ್ಕಾದಿಂದ ಮದೀನಾಗೆ ತೆರಳುತ್ತಿದ್ದಾಗ ಮುಫ್ರಿಹಾತ್ ಬಳಿ ಭಾರತೀಯ ಕಾಲಮಾನ ಬೆಳಗಿನ ಜಾವ 1.30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಆ ಸಮಯದಲ್ಲಿ ಅನೇಕ ಪ್ರಯಾಣಿಕರು ನಿದ್ರಿಸುತ್ತಿದ್ದರು ಎಂದು ವರದಿಯಾಗಿದೆ. ಡಿಕ್ಕಿಯ ನಂತರ ಬಸ್ ಬೆಂಕಿಗೆ ಆಹುತಿಯಾದಾಗ ಅವರು ತಪ್ಪಿಸಿಕೊಳ್ಳಲು ಕಡಿಮೆ ಅವಕಾಶವಿತ್ತು. ಮೃತರಲ್ಲಿ ಕನಿಷ್ಠ 11 ಮಹಿಳೆಯರು ಮತ್ತು 10 ಮಕ್ಕಳು ಕೂಡ ಇದ್ದರು.
ಮೃತರ ಸಂಖ್ಯೆಗಳ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದೆ ಎಂದು ತೆಲಂಗಾಣ ಸರ್ಕಾರ ಹೇಳಿದೆ ಮತ್ತು ಮುಖ್ಯಮಂತ್ರಿ ರೇವಂತ್ ರೆಡ್ಡಿ ನವದೆಹಲಿಯ ಅಧಿಕಾರಿಗಳಿಗೆ ರಾಯಭಾರ ಕಚೇರಿ ಅಧಿಕಾರಿಗಳೊಂದಿಗೆ ಮಾತನಾಡುವಂತೆ ಹೇಳಿದ್ದಾರೆ.
ಬಸ್ ಬೆಂಕಿಗೆ ಆಹುತಿಯಾದಾಗ 42 ಉಮ್ರಾ ಯಾತ್ರಿಕರು ಬಸ್ಸಿನಲ್ಲಿದ್ದರು ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಉಪ ಮುಖ್ಯಸ್ಥ (ಡಿಸಿಎಂ) ಅಬು ಮಾಥೇನ್ ಜಾರ್ಜ್ ಅವರೊಂದಿಗೆ ಸಂಪರ್ಕದಲ್ಲಿದ್ದು, ಅಪಘಾತದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಮೃತದೇಹಗಳನ್ನು ಭಾರತಕ್ಕೆ ತರಬೇಕು ಮತ್ತು ಗಾಯಾಳುಗಳಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದು ಓವೈಸಿ ವಿನಂತಿಸಿದ್ದಾರೆ.





















