ಪುತ್ತೂರು: ಪುತ್ತೂರಿನ ಐತಿಹಾಸಿಕ ಕೋಟಿಚೆನ್ನಯ ಜೋಡುಕರೆ ಕಂಬಳದ ಆರಂಭದಲ್ಲಿ ಹಲವು ಹಿರಿಯರ ಪರಿಶ್ರಮದ ಮೂಲಕ ಕರೆಯನ್ನು ನಿರ್ಮಾಣ ಮಾಡಿದ್ದಾರೆ. ಈಗ ಅದು ಸುಲಭವಲ್ಲ. ಈ ಭಾರಿ ಕಂಬಳದ ಬಳಿಕ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶದ ಸಂದರ್ಭ ಹೊಸ ಕರೆ ನಿರ್ಮಾಣ ಮಾಡುವುದಾಗಿ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿಯವರು ಹೇಳಿದ್ದಾರೆ.
2026ರ ಜ. 24 ಮತ್ತು 25ರಂದು ನಡೆಯುವ ಪುತ್ತೂರಿನ ಐತಿಹಾಸಿಕ ಕೋಟಿಚೆನ್ನಯ ಜೋಡುಕರೆ ಕಂಬಳಕ್ಕೆ ಪೂರ್ವ ಸಿದ್ಧತೆಯಾಗಿ ಪ್ರಥಮ ಸಭೆಯು ನ.17ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು.
ಸಭೆಯಲ್ಲಿ ಕಂಬಳ ಸಮಿತಿ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿ ಮಾತನಾಡಿ, ಕಂಬಳ ದಿನ ಕಳೆದಂತೆ ಪ್ರಸಿದ್ಧಿ ಪಡೆಯುತ್ತಿದೆ. ಇವತ್ತು ಬಂಗಾರದ ದರ ಒಂದು ಕಡೆ ಏರಿಕೆಯಾಗುತ್ತಿದೆ. ಜೊತೆಗೆ ಖರ್ಚುವೆಚ್ಚಗಳು ಹೆಚ್ಚಾಗುತ್ತಿದೆ. ಕಂಬಳದ 10ನೇ ವರ್ಷದಲ್ಲಿ ಎಲಿಕ ಜಯರಾಜ್ ಅವರು ಕಂಬಳದಲ್ಲಿ ವಿಜೇತರಿಗೆ ಕೊಡುವ ಚಿನ್ನದ ಪದಕವನ್ನು 2 ಪವನ್‌ಗೆ ಏರಿಕೆ ಮಾಡಿಸಿದ್ದರು. ಈಗ ಪವನ್‌ಗೆ ಲೆಕ್ಕ ಹಾಕಿದರೆ ಭಾರಿ ದೊಡ್ಡ ಸಂಗತಿಯಾಗಿದೆ. ಮತ್ತೊಂದು ಕಡೆ ಕರೆಯ ಜವಾಬ್ದಾರಿಯೂ ಕೂಡಾ ನಾವೇ ಮಾಡಬೇಕಾಗಿದೆ.
ಹಾಗಾಗಿ ಕಂಬಳದ ಬಳಿಕ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶದ ಸಂದರ್ಭ ಹೊಸ ಕರೆ ನಿರ್ಮಾಣ ಮಾಡಲಾಗುವುದು. ಸುಮಾರು 20ಲಕ್ಷ ರೂಪಾಯಿ ವೆಚ್ಚದಲ್ಲಿ ಕರೆ ಮಾಡುವ ವ್ಯವಸ್ಥೆ ಇದೆ. ಇದಕ್ಕೆ ನಮ್ಮ ಶಾಸಕರು ಕೂಡಾ ಸಹಕಾರ ನೀಡಲಿದ್ದಾರೆ. 32 ವರ್ಷದ ಹಿಂದೆ ವಿನಯ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ಕೊಡಿಂಬಾಡಿ ದಿವಾಕರ್, ಜಯರಾಜ್ ಸಹಿತ ಹಲವಾರು ಹಿರಿಯರು ಶ್ರಮದಾನದ ಮೂಲಕ ಕಂಬಳದ ಕರೆ ಮಾಡಿಸಿದ್ದರು ಎಂದು ಅವರು ನೆನಪಿಸಿಕೊಂಡರು.
ಕಳೆದ ಸಲ ಕಂಬಳದ ಜೊತೆಗೆ ಕೆಸರುಗದ್ದೆ ಓಟ ಮಾಡಿದ್ದೆವು. ಅದನ್ನು ಈ ಭಾರಿಯೂ ಮಾಡಲಿಕ್ಕಿದೆ. ಕಳೆದ ಸಲ ಮೊದಲ ಪ್ರಯತ್ನದಲ್ಲೇ ಕೆಸರುಗದ್ದೆ ಓಟ ಯಶಸ್ವಿಯಾಗಿದೆ. ಕಂಬಳಕ್ಕೆ ಇದರಿಂದ ಯಾವುದೆ ಸಮಸ್ಯೆ ಆಗಿಲ್ಲ ಎಂದು ಹೇಳಿದ ಚಂದ್ರಹಾಸ ಶೆಟ್ಟಿಯವರು ಈ ಬಾರಿಯೂ ಇದೆ ಪೂರ್ಣ ಸಹಕಾರ ಬೇಕೆಂದರು.
ಮಾಜಿ ಮಂತ್ರಿಗಳು ಮತ್ತು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಗೌರವಾಧ್ಯಕ್ಷ, ವಿನಯ ಕುಮಾರ್ ಸೊರಕೆ ಅವರು ಮಾತನಾಡಿ, 35 ವರ್ಷದ ಹಿಂದೆ ನಿಂತು ಹೋದ ಕಂಬಳ ಮತ್ತೆ ಜಯಂತ ರೈ ಅವರ ನೇತೃತ್ವದಲ್ಲಿ ಅರಂಂಭಗೊಂಡಿತು. ಅವರ ಯುವಕರ ಆಕರ್ಷಣೆಯ ಶಕ್ತಿಯಿಂದ ಆಗ ಶ್ರಮದಾನದ ಮೂಲಕವೇ ಕರೆ ಮಾಡಲಾಯಿತು. ಶ್ರೀಪತಿ ಆರಿಗ, ಎನ್.ಸುಧಾಕರ್ ಶೆಟ್ಟಿಯವರ ಮುಂದಾಳತ್ವದಲ್ಲಿ ನಡೆಯುತ್ತಿದ್ದ ಕಂಬಳ ಒಂದಷ್ಟು ಸಮಯ ಕಂಬಳ ನಿಂತು ಹೋಗುತ್ತದೆ ಎಂದಾಗ ಮುತ್ತಪ್ಪ ರೈ ಅವರು ಮತ್ತೆ ಅದಕ್ಕೆ ಬಹಳ ದೊಡ್ಡ ಮೆರುಗು ನೀಡಿದರು. ಅವರ ಬಳಿಕ ಚಂದ್ರಹಾಸ ಶೆಟ್ಟಿಯವರ ನೇತೃತ್ವದಲ್ಲಿ ಕಂಬಳ ಯಶಸ್ವಿಯಾಗಿ ನಡೆಯುತ್ತಿದೆ. ಈ ಬಾರಿ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾರ್ಯವು ನಡೆಯುತ್ತಿರುವಾಗ ಕಂಬಳದ ಕರೆಯನ್ನು ಬದಲಾಯಿಸುವ ಚಿಂತನೆಯೂ ನಡೆದಿದೆ. ಕಟಪಾಡಿ ಬೀಡುವಿನಲ್ಲೂ ನಿರಂತರ ಕಂಬಳ ನಡೆಯುತ್ತಿತ್ತು. ಈ ಬಾರಿ ಅಲ್ಲೂ ಕಟಪಾಡಿಯಿಂದ ಎರ್ಮಾಳುವಿನಲ್ಲಿ ತೆಂಕ ಬಡ ಕಂಬಳ ನಡೆಯಲಿದೆ. ಇವತ್ತು ಕರೆ ಮಾಡಲು ಮರಳಿನ ಸಮಸ್ಯೆಯಿಂದಾಗಿ ಕ್ರಷರ್ ಹುಡಿ ಬಳಸುವ ಕಾಲ ಬಂದಿದೆ. ಹಾಗಾಗಿ ಪುತ್ತೂರಿನ ಕಂಬಳಕ್ಕೆ ಯಾರೆ ಬರಲಿ, ಬಾರದೆ ಇರಲಿ ನಿರೀಕ್ಷೆಗೂ ಮೀರಿ ಇಲ್ಲಿ ನಿರಂತರ ಕಂಬಳ ನಡೆಯಲಿದೆ. ಇದು ರೈತರ ವೀರತ್ವದ ಶಕ್ತಿ. ಕ್ರೀಡೆಗೆ ಒತ್ತು ಕೊಟ್ಟರೆ ಕೃಷಿಗೆ ಒತ್ತು ಕೊಟ್ಟಂತೆ ಎಂದರು.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ, ಇವತ್ತು ಕೋಟಿ ಚೆನ್ನಯ ಜೋಡುಕರೆ ಕಂಬಳದ ಸಭೆ ಪ್ರಥಮವಾಗಿ ದೇವಳದ ನಟರಾಜ ವೇದಿಕೆಯಲ್ಲಿ ನಡೆಯುತ್ತಿದೆ. ಇದು ಕಂಬಳ ದೇವರಿಗೆ ಬಹಳ ಹತ್ತಿರವಾಗುತ್ತಿರುವ ಸೂಚನೆ ನೀಡಿದಂತಾಗಿದೆ. ಕಂಬಳದಲ್ಲಿ ಅತ್ಯಂತ ಉದ್ದದ ಕರೆ, ಹೆಚ್ಚು ಕಾರ್ಯಕರ್ತರು, ಸ್ಪರ್ಧೆಯಲ್ಲಿ ಭಾಗವಹಿಸುವಲ್ಲೂ ಹೆಚ್ಚು ಕೋಣಗಳು ನಮ್ಮ ಕೋಟಿ ಚೆನ್ನಯ ಜೋಡುಕರೆ ಕಂಬಳವಾಗಿದೆ. ಬಹಳ ಅಚ್ಚುಕಟ್ಟಾದ ವ್ಯವಸ್ಥೆ ಇಲ್ಲಿ ಆಗುತ್ತಿದೆ. ಕಂಬಳದ ಗದ್ದೆಯಲ್ಲಿ ಕೋಣಗಳಿಗೆ ನೀರು ಹಾಯಿಸಲು ಮತ್ತು ಕರೆಗೆ ನೀರು ಬಿಡಲು ಪ್ರತ್ಯೇಕ ಬೋರ್‌ವೆಲ್ ವ್ಯವಸ್ಥೆ ಮಾಡಲಾಗಿದೆ. ಕಂಬಳದ ಆರಂಭದಿಂದ ಕೊನೆಯ ತನಕ ಕಾರ್ಯಕರ್ತರು ಸಹಕರಿಸಬೇಕು. ಮಹಾಲಿಂಗೇಶ್ವರ ದೇವರ ಆಶೀರ್ವಾದದಿಂದ ಕಂಬಳ ಸಂಪೂರ್ಣ ಯಶಸ್ವಿಯಾಗಿ ನಡೆಯಲಿದೆ ಎಂದರು.
ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಸಂಚಾಲಕ ವಸಂತ ಕುಮಾರ್ ರೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 32 ವರ್ಷಗಳಿಂದ ಪುತ್ತೂರಿನ ಕೋಟಿ ಚೆನ್ನಯ ಜೋಡುಕರೆ ಕಂಬಳ ಪ್ರಸಿದ್ಧಿ ಪಡೆದಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಕಂಬಳ ಹೆಸರು ಪಡೆದಿದೆ ಎಂದರು.
ಕಂಬಳ ಸಮಿತ ಉಪಾಧ್ಯಕ್ಷ ಶಿವರಾಮ ಆಳ್ವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ ವಿ ಅತಿಥಿಗಳನ್ನು ಗೌರವಿಸಿದರು. ಬಾಲಕೃಷ್ಣ ಪಳ್ಳತ್ತಾರು ಮತ್ತು ಕುಂಬ್ರ ದುರ್ಗಾಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.
ಮಾಣಿ ಉಮೇಶ್ ಸಾಗು, ಕಬಡ್ಡಿ ಕ್ರೀಡಾಪಟುಗಳಾದಪ್ರಶಾಂತ್ ರೈ ಕೈಕಾರ, ಅಜಿತ್, ಸಮಿತಿ ಪದಾಧಿಕಾರಿಗಳಾದ ಜೋಕಿಂ ಡಿಸೋಜಾ,ಜಿನ್ನಪ್ಪ ಪೂಜಾರಿಮುರ, ಶಶಿಕಿರಣ್ ರೈ ನೂಜಿಬೈಲು, ದುರ್ಗಾ ಪ್ರಸಾದ್ ರೈ ಕುಂಬ್ರ, ದಿನೇಶ್ ವಲೇರಿಯನ್ ಡಯಾಸ್, ರೋಷನ್ ರೈ ಬನ್ನೂರು,ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ ಅಬೂಬಕ್ಕರ್ ಮುಳಾರ್, ವಿಕ್ರಂ ಶೆಟ್ಟಿ ಅಂತರ,ಶಿವಪ್ರಸಾದ್ ರೈ ಮಟಂತಬೆಟ್ಟು, ಮುರಳಿಧರ ರೈ ಮಟಂತಬೆಟ್ಟು, ರಂಜಿತ್ ಬಂಗೇರ, ಪನಡ್ಕ ಗಂಗಾಧರ ಶೆಟ್ಟಿ ಪ್ರಶಾಂತ್ ಮುರ, ಕೈಕಾರ, ದಿಲೀಪ್ ಶೆಟ್ಟಿ ಕೈಕಾರ ಡಾ.ರಾಜಾರಾಮ ಉಪ್ಪಿನಂಗಡಿ, ಸುಮಿತ್ ಶೆಟ್ಟಿ ಕಂಬಳಬೆಟ್ಟು, ಕೆ ಸತೀಶ್ ಕುಮಾರ್, ಪ್ರಶಾಂತ್ ಮುರ, ರಾಕೇಶ್ ರೈ ಬೋಲೋಡಿ ಗುತ್ತು, ಪ್ರಶಾಂತ್ ರೈ ಕೈಕಾರ, ದಾಮೋದರ ಮುರ, ಜೆ.ಪಿ. ಸಂತೋಷ್ ಕುಮಾರ್, ಚಂದ್ರಶೇಖರ ಪಾಲ್ತಾಡಿ, ಪ್ರಹಾದ್ ಬೆಳ್ಳಿ ಪಾಡಿ, ಗಗನ್ ದೀಪ್, ಪ್ರವೀಣ್ ಕುಂಜಾರ್, ಸುದೇಶ್ ನ್ಯಾಕ್, ಉಮೇಶ್ ಕರ್ಕೆರ,ಪ್ರವೀಣ್ ಕುಮಾರ್, ನವೀನ್ ಚಂದ್ರನ್ಯಾಕ್ ಬೆದ್ರಾಳ, ಹಂಝಾ ಎಲಿಯ, ಶರತ್ ಕೇಪುಳು, ಚಂದ್ರಹಾಸ ಶೆಟ್ಟಿ ಬನ್ನೂರು,ಜಯಪ್ರಕಾಶ್ ಬದಿ ನಾರ್, ರಾಜೇಶ್ ಶೆಟ್ಟಿ,ಮಟಂ ತಬೆಟ್ಟು,ಸುಶಾಂತ್ ಶೆಟ್ಟಿ ಕಂಬಳಬೆಟ್ಟು, ಕೆ ಸುಂದರ, ಕಿರಣ್ ಡಿಸೋಜ, ಯೋಗೀಶ್ ಸಾಮಾನಿ, ರಾಕೇಶ್ ಶೆಟ್ಟಿ,ರಮೇಶ್ ಗೌಡ,ಉಮಾಶಂಕರ್ ನ್ಯಾಕ್ ಪಾಂಗಳಾಯಿ, ಮುಹಮ್ಮದ್ ಬಡಗನ್ನೂರು, ಮೌರಿಸ್ ಮಸ್ಕರೇನಸ್,ಕಿಶಾನ್ ಸರೋಳಿ, ಖಾದರ್ ಪೋಳ್ಯ, ಹಸೈನಾರ್ ಬನಾರಿ, ಮಹಾಬಲ ರೈ ಒಳತಡ್ಕ, ವಿನಯ ಸುವರ್ಣ, ಸನತ್ ರೈ ಒಳತಡ್ಕ, ಅಭಿಷೇಕ್ ಬೆಳ್ಳಿ ಪಾಡಿ, ಸುರೇಂದ್ರ ರೈ ನೇಸಾರ, ದಾಮೋದರ,ಬಾಲಕೃಷ್ಣ, ಗಣೇಶ್ ರಾಜ್ ಬಿಳಿಯೂರು, ಪ್ರವೀಣ್ ಶೆಟ್ಟಿ ಅಳಕೆಮಜಾಲ್, ರಜಾಕ್ ಬಿ ಎಚ್, ಬಿಪಿನ್ ಕುಮಾರ್ ಶೆಟ್ಟಿ ಮೊದಲಾದ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.
ಶಾಸಕ ಅಶೋಕ್ ಕುಮಾರ್ ರೈ ಅವರ ಮುತುವರ್ಜಿಯಲ್ಲಿ ಸುಮಾರು 10 ಕಂಬಳ ಸಮಿತಿಗೆ ತಲಾ ರೂ. 5ಲಕ್ಷವನ್ನು ಸರಕಾರದಿಂದ ಸಿಗಲಿದೆ. ಈ ಕುರಿತು ಶಾಸಕರ ಈ ಪ್ರಯತ್ನವನ್ನು ಎಲ್ಲಾ ಕಂಬಳ ಸಮಿತಿಯವರು ಅಭಿನಂದಿಸಬೇಕು.






















