ಭಾರತೀಯ ನೌಕಾಪಡೆಯ ಹಡಗುಗಳಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನದಲ್ಲಿರುವ ಅಪರಿಚಿತ ವ್ಯಕ್ತಿಗಳಿಗೆ ಹಂಚಿಕೊಳ್ಳುತ್ತಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಇಬ್ಬರು ವ್ಯಕ್ತಿಗಳನ್ನು ಉಡುಪಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಸುಲ್ತಾನ್‌ಪುರದ ರೋಹಿತ್ (29) ಮತ್ತು ಸಾಂತ್ರಿ (37) ಬಂಧಿತರು. ಇಬ್ಬರೂ ಮಲ್ಪೆಯಲ್ಲಿರುವ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನ ಗುತ್ತಿಗೆ ಉದ್ಯೋಗಿಯಾಗಿದ್ದಾರೆ, ಸಾಂತ್ರಿ ಈ ಹಿಂದೆ ಕೇರಳದ ಕೊಚ್ಚಿಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಎಂದು ಉಡುಪಿ ಎಸ್‌ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನ ಸಿಇಒ ಗುರುವಾರ ಮಲ್ಪೆಯಲ್ಲಿ ಸಲ್ಲಿಸಿದ ದೂರಿನ ಆಧಾರದ ಮೇಲೆ – ಮಲ್ಪೆ ಪೊಲೀಸರು ಬಿಎನ್‌ಎಸ್‌ನ ಸೆಕ್ಷನ್ 152 ಮತ್ತು 1923 ರ ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 3 ಮತ್ತು 5 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇಬ್ಬರು ಆರೋಪಿಗಳು ಡಿಪ್ಲೊಮಾ ಪದವೀದರರಾಗಿದ್ದಾರೆ. ಮಲ್ಪೆಯಲ್ಲಿರುವ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್, ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಅಡಿಯಲ್ಲಿರುವ ಸಂಸ್ಥೆಯಾಗಿದೆ.
ಈ ಸಂಸ್ಥೆಯು M/S ಶುಷ್ಮಾ ಮೆರೈನ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯೊಂದಿಗೆ ಉಪ ಗುತ್ತಿಗೆಯನ್ನು ಹೊಂದಿದೆ. ರೋಹಿತ್ ಮತ್ತು ಸಾಂತ್ರಿ ಅವರನ್ನು ಈ ಕಂಪನಿಯು ಇನ್ಸುಲೇಟರ್‌ಗಳಾಗಿ ಕೆಲಸ ಮಾಡಲು ನೇಮಿಸಿಕೊಂಡಿತ್ತು. ಇದಕ್ಕೂ ಮೊದಲು, ರೋಹಿತ್ ಕೊಚ್ಚಿಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಕೆಲಸ ಮಾಡುತ್ತಿದ್ದರು, ಅಲ್ಲಿ ಭಾರತೀಯ ನೌಕಾಪಡೆಗೆ ಸಂಬಂಧಿಸಿದ ಹಡಗುಗಳನ್ನು ನಿರ್ಮಿಸಲಾಗುತ್ತದೆ ಮತ್ತು ದುರಸ್ತಿ ಮಾಡಲಾಗುತ್ತದೆ ಎಂದು ಎಸ್‌ಪಿ ಹೇಳಿದರು.
ಕೇರಳದಲ್ಲಿ ಕೆಲಸ ಮಾಡುವಾಗ, ರೋಹಿತ್ ಭಾರತೀಯ ನೌಕಾಪಡೆಗೆ ಸಂಬಂಧಿಸಿದ ಹಡಗುಗಳ ದುರಸ್ತಿ ವೇಳಾಪಟ್ಟಿಯಂತಹ ಗೌಪ್ಯ ವಿವರಗಳನ್ನು ವಾಟ್ಸಾಪ್ ಮೂಲಕ ಅಕ್ರಮವಾಗಿ ಹಂಚಿಕೊಂಡಿದ್ದ, ‘ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ಗೆ ಬಂದ ನಂತರವೂ ರೋಹಿತ್ ಕೊಚ್ಚಿಯಲ್ಲಿರುವ ಆತನ ಸ್ನೇಹಿತನಿಂದ ಮಾಹಿತಿ ಪಡೆದು, ವಾಟ್ಸ್ ಆ್ಯಪ್ ಮೂಲಕ ಅನಧಿಕೃತ ವ್ಯಕ್ತಿಗೆ ಶೇರ್ ಮಾಡಿ ಅನಧಿಕೃತ ಲಾಭ ಪಡೆದುಕೊಂಡಿದ್ದ.
ಇದರಿಂದಾಗಿ ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಮತ್ತು ಆಂತರಿಕ ಭದ್ರತೆಗೆ ಅಪಾಯವನ್ನುಂಟುಮಾಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಎಸ್‌ಪಿ ಹೇಳಿದರು.
ಇಬ್ಬರು ಆರೋಪಿಗಳು ಪಾಕಿಸ್ತಾನದೊಂದಿಗೆ ಮಾಹಿತಿಯನ್ನು ಹಂಚಿಕೊಂಡಿರಬಹುದು ಎಂದು ಹೇಳಿದರು. “ಇಬ್ಬರೂ ಕಳೆದ 18 ತಿಂಗಳುಗಳಿಂದ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ ಎಂದು ಶಂಕಿಸಲಾಗಿದೆ.
‘ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಅವರನ್ನು ಕಸ್ಟಡಿಗೆ ಪಡೆದು ಇನ್ನಷ್ಟು ವಿಚಾರಣೆ ನಡೆಸಲಾಗುವುದು’ ಎಂದರು. ಡಿಸೆಂಬರ್ 3 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳು ಬಳಸಿದ್ದ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ,” ಎಂದು ಅವರು ಹೇಳಿದರು.























