ಕಳ್ಳತನವಾದ್ರೆ, ರಾಬರಿ ನಡೆದರೆ ಜನರು ಪೊಲೀಸರ ಬಳಿ ಹೋಗ್ತಾರೆ. ಆದ್ರೆ ಅದೇ ಪೊಲೀಸರೇ ದರೋಡೆಗೆ ಇಳಿದ್ರೆ ಸ್ಥಿತಿ ಏನಾಗಬಹುದು? ಹೌದು, ಅಂತಹುದ್ದೇ ಒಂದು ಘಟನೆ ರಾಜ್ಯದಲ್ಲಿ ನಡೆದಿರೋದು ಬೆಳಕಿಗೆ ಬಂದಿದೆ. ಬಂಗಾರ ವ್ಯಾಪಾರಿಯನ್ನು ಬೆದರಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನ ಲಪಟಾಯಿಸಿದ್ದ ಪ್ರಕರಣ ಸಂಬಂಧ ಇಬ್ಬರು ಪೊಲೀಸ್ ಅಧಿಕಾರಿಗಳನ್ನ ದಾವಣಗೆರೆಯಲ್ಲಿ ಬಂಧಿಸಲಾಗಿದೆ. ಮಾಳಪ್ಪ ಚಿಪ್ಪಲಕಟ್ಟಿ ಹಾಗೂ ಪ್ರವೀಣ್ ಕುಮಾರ್ ಬಂಧಿತ ಪಿಎಸ್ಐಗಳಾಗಿದ್ದಾರೆ.
ಕಾರವಾರ ಮೂಲದ ಚಿನ್ನದ ವ್ಯಾಪಾರಿ ವಿಶ್ವನಾಥ್ ಎಂಬವರು ದಾವಣಗೆರೆಯ ಚಿನ್ನದ ವ್ಯಾಪಾರಿಗಳಿಂದ ಗಟ್ಟಿ ಚಿನ್ನ ಪಡೆದು ಆಭರಣ ತಯಾರಿಸಿ ನೀಡುತ್ತಿದ್ದರು. ಅದರಂತೆ ವ್ಯಾಪಾರಿಗಳಿಂದ ಚಿನ್ನ ಪಡೆದು ಕಳೆದ ನವೆಂಬರ್ 24ರ ಮಧ್ಯರಾತ್ರಿ 12.30ರ ವೇಳೆಗೆ ಕಾರವಾರಕ್ಕೆ ತೆರಳಲೆಂದು ದಾವಣಗೆರೆ ಕೆಎಸ್ಆರ್ಟಿಸಿ ಬಸ್ನಲ್ಲಿ ಕೂತಿದ್ದರು. ಇವರ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ಮಾಳಪ್ಪ ಚಿಪ್ಪಲಕಟ್ಟಿ ಹಾಗೂ ಪ್ರವೀಣ್ ಕುಮಾರ್, ಸಿವಿಲ್ ಡ್ರೆಸ್ನಲ್ಲಿ ಹೋಗಿ ಚಿನ್ನದ ವ್ಯಾಪಾರಿಯ ಕೊರಳಪಟ್ಟಿ ಹಿಡಿದಿದ್ದಾರೆ. ಜೊತೆಗೆ ಬಸ್ನಿಂದ ಕೆಳಗಿಳಿಸಿ ತಾವು ಪೊಲೀಸ್ ಅಧಿಕಾರಿಗಳೆಂದು ಬೆದರಿಕೆ ಹಾಕಿದ್ದಾರೆ. ಈ ವೇಳೆ ನೀವು ಪೊಲೀಸರು ಎಂದು ತಾನು ಹೇಗೆ ನಂಬಬೇಕು ಎಂದು ವಿಶ್ವನಾಥ್ ಪ್ರಶ್ನಿಸಿದ್ದರಿಂದ ಪಿಎಸ್ಐಗಳಾದ ಮಾಳಪ್ಪ ಹಾಗೂ ಪ್ರವೀಣ್ ತಮ್ಮ ಐಡಿಯನ್ನೂ ತೋರಿಸಿದ್ದಾರೆ. ಬಳಿಕ ಬಸ್ ನಿಲ್ದಾಣದ ಹೊರಗೆ ನಿಂತ ಪೊಲೀಸ್ ಜೀಪ್ ಹಾಗೂ ನಕಲಿ ಗನ್ ತೋರಿಸಿ ವಿಶ್ವನಅಥ್ ಬಳಿ ಇದ್ದ ಸುಮಾರು 80ಗ್ರಾಂ ಚಿನ್ನವನ್ನು ಕಸಿದುಕೊಂಡಿದ್ದಾರೆ.
ಇನ್ನು ವ್ಯಾಪಾರಿ ವಿಶ್ವನಾಥ್ರನ್ನು ಪೊಲೀಸ್ ಜೀಪಿನಲ್ಲಿಯೇ ಕೆಟಿಜೆ ನಗರ ಪೊಲೀಸ್ ಠಾಣೆಗೆ ಕರೆತಂದಿರುವ ಪೊಲೀಸರು, ಠಾಣೆಯ ಹೊರಗೆ ನಿಂತು ನಾವು ಐಜಿಪಿ ಸ್ಕ್ವಾಡ್ನಲ್ಲಿದ್ದೇವೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಐಜಿಪಿಯವರ ಸೂಚನೆ ಮೇರೆಗೆ ಈತನನ್ನು ಕರೆದುಕೊಂಡು ಹೋಗುತ್ತೇವೆ ಎಂದು ಅದೇ ಜೀಪ್ನಲ್ಲಿ KSRTC ಬಸ್ ನಿಲ್ದಾಣದ ಬಳಿ ಕರೆದೊಯ್ದಿದ್ದಾರೆ. ಕಾರವಾರಕ್ಕೆ ತೆರಳುವಂತೆ ವಿಶ್ವನಾಥ್ಗೆ ಈ ವೇಳೆ ಆರೋಪಿಗಳು ಸೂಚಿಸಿ ತೆರಳಿದ್ದು, ಅನುಮಾನಗೊಂಡ ವಿಶ್ವನಾಥ್ ಈ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ಪ್ರಕರಣ ಬೆನ್ನತ್ತಿದ ಪೊಲೀಸರು ಚಿನ್ನದ ವ್ಯಾಪಾರಿಯಿಂದ ದರೋಡೆ ಮಾಡಿರುವ ಇಬ್ಬರು ಪಿಎಸ್ಐಗಳು ಹಾಗೂ ಇವರಿಗೆ ಸಹಾಯ ಮಾಡಿದ ಚಿನ್ನದ ಅಂಗಡಿ ಕೆಲಸಗಾರ ವಿನಾಯಕ ನಗರದ ಸತೀಶ್ ರೇವಣ್ಕರ್, ಶಿರಸಿ ಮೂಲದ ನಾಗರಾಜ್ ರೇವಣ್ಕರ್ನನ್ನು ಬಂಧಿಸಿದ್ದಾರೆ. ಪಿಎಸ್ಐಗಳಾದ ಮಾಳಪ್ಪ ಹಾಗೂ ಪ್ರವೀಣ್ ಇಬ್ಬರಿಗೂ ಹಾವೇರಿಯಿಂದ ದಾವಣಗೆರೆಯ ಪೂರ್ವ ವಲಯ ಐಜಿಪಿ ಕಚೇರಿಗೆ ವರ್ಗಾವಣೆಯಾಗಿತ್ತು. ಇನ್ನು ಕೆಲವೇ ದಿನಗಳಲ್ಲಿ ಸ್ಥಳ ನಿಗದಿಯೂ ಆಗುತ್ತಿತ್ತು. ಅಷ್ಟರೊಳಗೆ ಮಾಡಬಾರದನ್ನು ಮಾಡಿ ಇವರು ಜೈಲು ಸೇರಿದ್ದಾರೆ ಎಂಬುದು ಗೊತ್ತಾಗಿದೆ.























