ಡಿಕೆ ಶಿವಕುಮಾರ್‌ಮುಖ್ಯಮಂತ್ರಿಯಾಗಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬುಧವಾರ ಹೇಳಿದ್ದರು. ಇದೀಗ ಮತ್ತೊಬ್ಬರು ಸ್ವಾಮೀಜಿ ಡಿಕೆಶಿ ಬೆನ್ನಿಗೆ ನಿಂತಿದ್ದಾರೆ. ಸಿದ್ದರಾಮಯ್ಯ ಆಡಿದ ಮಾತಿನಂತೆ ಮುಖ್ಯಮಂತ್ರಿ ಸ್ಥಾನವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ಬಿಟ್ಟುಕೊಡಬೇಕು ಎಂದು ದೇಗುಲಹಳ್ಳಿ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ ಒತ್ತಾಯಿಸಿದ್ದಾರೆ. ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಮೊದಲ ಎರಡೂವರೆ ವರ್ಷಗಳ ಅವಧಿಗೆ ಸಹಕಾರ ನೀಡಿದ್ದಾರೆ ಎಂಬುದನ್ನು ಸ್ವಾಮೀಜಿ ಸ್ಮರಿಸಿದ್ದಾರೆ. ಸ್ವಇಚ್ಛೆಯಿಂದ ಸ್ಥಾನ ತ್ಯಾಗ ಮಾಡಿದರೆ ಸಾರ್ವಜನಿಕರಲ್ಲಿ ಉತ್ತಮ ಮನೋಭಾವ ಮೂಡುತ್ತದೆ. ಇಲ್ಲದಿದ್ದರೆ ಅವರನ್ನು ‘ಭ್ರಷ್ಟ ಸಿದ್ದರಾಮಯ್ಯ’ ಎಂದು ಟೀಕಿಸುವ ಸಾಧ್ಯತೆ ಇದೆ. ಸಿದ್ದರಾಮಯ್ಯ ‘ಮೊಂಡು ಮನುಷ್ಯ’. ಅವರು ಹಟ ಬಿಡಬೇಕೆಂದು ಸ್ವಾಮೀಜಿ ಸಲಹೆ ನೀಡಿದ್ದಾರೆ. ಅಧಿಕಾರ ಹಸ್ತಾಂತರಕ್ಕೆ ಒಪ್ಪದಿದ್ದರೆ, ಸರ್ಕಾರ ಪತನಗೊಳ್ಳುವ ಸಾಧ್ಯತೆ ಇದೆ ಎಂದು ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.






















