ಪುತ್ತೂರು: ರೋಟರಿ ಕ್ಲಬ್ ಪುತ್ತೂರಿನ ಶಾಶ್ವತ ಪ್ರಾಜೆಕ್ಟ್ ಪುತ್ತೂರು ರೋಟರಿ ಮ್ಯಾಮೋಗ್ರಾಫಿ ಸೆಂಟರಿನ ಉದ್ಘಾಟನೆ ನ. 28ರಂದು ಬೊಳುವಾರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿ ನಡೆಯಲಿದೆ ಎಂದು ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ. ಶ್ರೀಪ್ರಕಾಶ್ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 60ನೇ ವರ್ಷದ ಸಂಭ್ರಮದಲ್ಲಿರುವ ರೋಟರಿ ಕ್ಲಬ್ ಪುತ್ತೂರು ಇದರ ಅಂತಾರಾಷ್ಟ್ರೀಯ ರೋಟರಿ ಫೌಂಡೇಷನ್ ನ ಗ್ಲೋಬಲ್ ಗ್ರ್ಯಾಂಟ್ ಪ್ರಾಜೆಕ್ಟ್ ಇದಾಗಿದೆ. ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಹಾಗೂ ಜಿಲ್ಲೆ 6540, ರೋಟರಿ ಕ್ಲಬ್ ಶೆರೇರ್ವಿಲ್ ಯು.ಎಸ್.ಎ. ಇವುಗಳ ಸುಮಾರು 65 ಲಕ್ಷ ರೂಪಾಯಿಗಳ ಯೋಜನೆ ಪುತ್ತೂರು ರೋಟರಿ ಮ್ಯಾಮೋಗ್ರಾಫಿ ಸೆಂಟರ್ ಎಂದರು.
ಯೋಜನೆಯ ಉದ್ಘಾಟನೆಯನ್ನು ರೋಟರಿ ಜಿಲ್ಲೆ 3181ರ ಗವರ್ನರ್ ರಾಮಕೃಷ್ಣ ಪಿ.ಕೆ. ನೆರವೇರಿಸಲಿದ್ದಾರೆ. ಅನಿವಾಸಿ ಉದ್ಯಮಿ ಮೈಕೆಲ್ ಡಿಸೋಜ, ಎ.ಆರ್.ಆರ್.ಎಫ್.ಸಿ. ಕೃಷ್ಣ ಶೆಟ್ಟಿ, ಡಿ.ಆರ್.ಎಫ್.ಸಿ. ರಂಗನಾಥ ಭಟ್, ನಿಕಟಪೂರ್ವ ಜಿಲ್ಲಾ ಗವರ್ನರ್ ವಿಕ್ರಂ ದತ್ತ, ರೋಟರಿ ವಲಯ 5ರ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ, ವಲಯ ಸೇನಾನಿ ಉಮಾನಾಥ್ ಪಿ.ಬಿ. ಅತಿಥಿಗಳಾಗಿರುವರು ಎಂದರು.
ಯೋಜನೆಯ ಬಗ್ಗೆ ವಿವರಿಸಿದ ಡಾ. ಶ್ಯಾಮ್, ಸ್ತನದಲ್ಲಿ ಕಂಡುಬರುವ ಗೆಡ್ಡೆ, ಸೋಂಕು, ಕ್ಯಾನ್ಸರ್ ಲಕ್ಷಣಗಳನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚುವ ಯಂತ್ರ ಮ್ಯಾಮೋಗ್ರಾಫಿ. ಇದು ಚಿಕಿತ್ಸೆ ನೀಡುವ ಯೋಜನೆಯಲ್ಲ. ರೋಗ ಅಥವಾ ಗಡ್ಡೆ ಉಲ್ಭಣಗೊಳ್ಳುವ ಮೊದಲೇ ಪತ್ತೆಹಚ್ಚಿ, ಸೂಕ್ತ ವೈದ್ಯಕೀಯ ಚಿಕಿತ್ಸೆಗೆ ತಿಳಿಸಲಾಗುವುದು. ಇಲ್ಲಿವರೆಗೆ ಮ್ಯಾಮೋಗ್ರಾಫಿಗೆ ಮಂಗಳೂರಿಗೆ ತೆರಳಬೇಕಿತ್ತು. ಇದೀಗ ಪುತ್ತೂರಿನಲ್ಲಿ ಮ್ಯಾಮೋಗ್ರಾಫಿ ಸೆಂಟರ್ ಉದ್ಘಾಟನೆಗೊಳ್ಳುತ್ತಿದ್ದು, ಜಿಲ್ಲೆಯ 2ನೇ ಸೆಂಟರ್ ಇದಾಗಿದೆ. ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ತಪಾಸಣೆ ನಡೆಸಲಾಗುತ್ತದೆ ಪತ್ರಿಕಾಗೋಷ್ಠಿಯಲ್ಲಿ ವಿ.ಜೆ. ಫೆರ್ನಾಂಡೀಸ್, ಲೋವಲ್ ಮೆವಡ ಉಪಸ್ಥಿತರಿದ್ದರು.





















