ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕಲಾಯಿ ಅಶ್ರಫ್ ಹತ್ಯೆಗೆ ಪ್ರತೀಕಾರದ ಬಗ್ಗೆ ಸಂದೇಶಗಳು ಓಡಾಡುತ್ತಿದ್ದು, Target 900, Team Target Boys, Immu Bai ಇನ್ಸ್ಟಾಗ್ರಾಮ್ ಪೇಜ್ಗಳಲ್ಲಿ ಭಯ ಹುಟ್ಟಿಸುತ್ತಿರುವ ರೀತಿಯಲ್ಲಿ ಪೋಸ್ಟ್ ಮಾಡಲಾಗಿದೆ. 2017ರಲ್ಲಿ ನಡೆದ ಎಸ್‌ಡಿಪಿಐ ಮುಖಂಡ ಕಲಾಯಿ ಅಶ್ರಫ್ ಹತ್ಯೆ ಪ್ರಮುಖ ಆರೋಪಿ, ಹಿಂದೂ ಸಂಘಟನೆಯ ಮುಖಂಡ ಭರತ್ ಕುಮ್ಡೇಲ್ಗೆ ಈ ಮೂಲಕ ಎಚ್ಚರಿಕೆ ನೀಡಲಾಗಿದೆ.
ಸಂದೇಶ ಇರುವ ಪೋಸ್ಟ್ ಮಾಡಲಾಗಿದ್ದು, ಕೈಯಲ್ಲಿ ತಲವಾರು ಮತ್ತು ಪಿಸ್ತೂಲ್ ಹಿಡಿದು ಮುಖ ಮರೆಮಾಚಿ ಮಾಡಿರುವ ರೀಲ್ಸ್ ಕೂಡ ಪೋಸ್ಟ್ ಮಾಡಲಾಗಿದೆ. ಇತ್ತೀಚೆಗೆ ಕೇರಳದಲ್ಲಿ ಹತ್ಯೆಯಾದ ರೌಡಿಶೀಟರ್ ನೌಫಾಲ್ ಸಾವಿಗೂ ಪ್ರತೀಕಾರದ ಎಚ್ಚರಿಕೆ ನೀಡಲಾಗಿದೆ.
ಭರತ್ ಕುಮ್ಡೇಲ್ ಸದ್ಯ ಮಂಗಳೂರು ಜೈಲಿನಲ್ಲಿದ್ದು, ಪ್ರಚೋದನಾಕಾರಿ ಇನ್ಸ್ಟಾಗ್ರಾಮ್ ಪೋಸ್ಟ್ಗಳ ಮೇಲೆ ಮಂಗಳೂರು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಈ ಬಗ್ಗೆ ಸುಮೋಟೊ ಕೇಸ್ ದಾಖಲಿಸಿರುವ ಖಾಕಿ, 16 ಇನ್ಸ್ಟಾಗ್ರಾಮ್ ಖಾತೆಗಳ ವಿರುದ್ಧ ಎಫ್ಐಆರ್ ಮಾಡಿದೆ. ಜೊತೆಗೆ ಆಯಕಟ್ಡಿನ ಜಾಗಗಳ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ನಟೋರಿಯಸ್ ಗ್ಯಾಂಗ್ಗಳ ಚಲನವಲನಗಳನ್ನೂ ಗಮನಿಸಲಾಗುತ್ತಿದೆ.
ಈ ಹಿಂದೆಯೂ ಭರತ್ ಕುಮ್ಡೇಲ್ಗೆ ಸಾಮಾಜಿಕ ತಾಣಗಳ ಮೂಲಕ ಕೊಲೆ ಬೆದರಿಕೆ ಹಾಕಲಾಗಿತ್ತು. BEARY_ROYAL_NAWAB, ಬ್ಯಾರಿ ಟ್ರೋಲರ್, ಮಂಗಳೂರು ಕಿಂಗ್ ಎಂಬ ಹೆಸರಿನ ಪೇಜ್ಗಳ ಮುಖಾಂತರ ಎಚ್ಚರಿಕೆಯ ಸಂದೇಶ ಬಂದಿತ್ತು. ಭರತ್ ಕುಮ್ಡೇಲ್ ರಕ್ತ ಈ ಭೂಮಿಗೆ ಹರಿಸದೆ ನಮಗೆ ಸಮಾಧಾನವಿಲ್ಲ. ನಮ್ಮ ಸಹೋದರ ಶಾಹಿದ್ ಅಶ್ರಫ್ ಕಲಾಯಿಯನ್ನು ಮರೆತಿಲ್ಲ, ಪ್ರತಿರೋಧ ಅಪರಾಧವಲ್ಲ ಎಂದು ಪೋಸ್ಟ್ ಮಾಡಲಾಗಿತ್ತು.























