ಮದುವೆಯಾಗಿ ಒಂದು ತಿಂಗಳು ಕಳೆಯುವ ಒಳಗೆ ನವ ವಿವಾಹಿತೆ ನಿಗೂಢವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಐಶ್ವರ್ಯ (26) ಮೃತ ಯುವತಿಯಾಗಿದ್ದು, ಗಂಡನೇ ಆಕೆಯನ್ನು ಕೊಲೆ ಮಾಡಿರೋದಾಗಿ ಪೋಷಕರು ಆರೋಪಿಸಿದ್ದಾರೆ. 27 ದಿನಗಳ ಹಿಂದೆಯಷ್ಟೇ ಲಿಖಿತ್ ಸಿಂಹ ಜೊತೆ ಐಶ್ವರ್ಯ ಮದುವೆ ನಡೆದಿತ್ತು. ಸುಂದರ ಸಂಸಾರದ ಕನಸು ಕಂಡಿದ್ದ ಐಶ್ವರ್ಯ, ಸಾಂಸಾರಿಕ ಬದುಕನ್ನು ಸರಿಯಾಗಿ ಆರಂಭಿಸುವ ಮುನ್ನವೇ ಪ್ರಾಣ ಕಳೆದುಕೊಂಡಿದ್ದಾರೆ.
ಮೂಲತಃ ನಾಗಮಂಗಲ ನಿವಾಸಿಗಳಾದ ಮಮತಾ ಹಾಗೂ ಕೃಷ್ಣಮೂರ್ತಿ ದಂಪತಿಯ ಹಿರಿ ಮಗಳು ಐಶ್ವರ್ಯಳನ್ನು ಬಾಗಲಗುಂಟೆ ಪೈಪ್ ಲೈನ್ ಮಲ್ಲಸಂದ್ರ ನಿವಾಸಿ ಲಿಖಿತ್ ಸಿಂಹ ಅವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಮದುವೆ ನಡೆದಿತ್ತಾದರೂ ತಿಂಗಳು ಕಳೆಯುವದರ ಒಳಗೆ ಐಶ್ವರ್ಯಗೆ ಕಿರುಕುಳ ನೀಡಲಾಗಿದೆ. ಇದೇ ವಿಚಾರವಾಗಿ ನಿನ್ನೆ ಬೆಳಿಗ್ಗೆ ಕುಟುಂಬಸ್ಥರು ರಾಜಿ ಪಂಚಾಯ್ತಿ ಮಾಡಿದ್ದರು. ಇಷ್ಟಾದ್ರೂ ಸಂಜೆ ಐಶ್ವರ್ಯಾಳ ಮೇಲೆ ಮತ್ತೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ನಿನ್ನೆ ಸಂಜೆ ವೇಳೆಗೆ ಲಿಖಿತ್ ತಮ್ಮ ಕರೆ ಮಾಡಿ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಮನೆಗೆ ಬಂದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಆದರೆ ಬಾಗಿಲು ಒಡೆಯದ ಪರಿಣಾಮ, ಗಂಡನೇ ನೇಣುಹಾಕಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಶ್ವರ್ಯ ಪತಿ ಲಿಖಿತ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.






















