ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಕಾಲ್ತುಳಿತ ಪ್ರಕರಣದ ನಂತರ, ಮುಂದೆ ಮತ್ತೇ ಈ ರೀತಿಯ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂಬ ಉದ್ದೇಶದಿಂದ ಕ್ರೀಡಾಂಗಣದಲ್ಲಿ ಮಹಾಪೂಜೆ ನಡೆಸಲಾಯಿತು. ಸ್ಟೇಡಿಯಂ ಶಾಂತವಾಗಿದ್ದು, ಕ್ರಿಕೆಟ್ ಪಂದ್ಯಗಳು ಸುರಕ್ಷಿತವಾಗಿ ನಡೆಯಲಿ ಎಂಬ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಪೂಜೆಯಲ್ಲಿ ಸುದರ್ಶನ ಹೋಮ, ನವಗ್ರಹ ಪೂಜೆ ಹಾಗೂ ಗಣಪತಿ ಪೂಜೆಗಳನ್ನು ವಿಧಿವಿಧಾನಗಳಂತೆ ನಡೆಸಲಾಯಿತು. ಒಟ್ಟು ಆರು ಮಂದಿ ಪುರೋಹಿತರು ಹೋಮ–ಹವನ ಕಾರ್ಯದಲ್ಲಿ ಭಾಗವಹಿಸಿ ಪೂಜೆ ನೆರವೇರಿಸಿದರು.
24ರಿಂದ ಆರಂಭವಾಗಲಿರುವ ಕ್ರಿಕೆಟ್ ಪಂದ್ಯಾವಳಿಯನ್ನು ಗಮನದಲ್ಲಿಟ್ಟುಕೊಂಡು ಈ ಪೂಜೆ ಆಯೋಜಿಸಲಾಗಿದೆ. ಪಂದ್ಯಾವಳಿ ವೇಳೆ ಯಾವುದೇ ಅಶಾಂತಿ ಅಥವಾ ಅನಾಹುತ ಸಂಭವಿಸಬಾರದೆಂಬುದು ಆಯೋಜಕರ ಪ್ರಮುಖ ಉದ್ದೇಶವಾಗಿದೆ.
ಪೂಜಾ ಕಾರ್ಯಕ್ರಮದಲ್ಲಿ ಕೆಎಸ್‌ಸಿಎ ನೂತನ ಪದಾಧಿಕಾರಿಗಳು ಭಾಗವಹಿಸಿ, ಚಿನ್ನಸ್ವಾಮಿ ಸ್ಟೇಡಿಯಂಗೆ ಪೂಜೆ ಸಲ್ಲಿಸಿದರು. ಮುಂಬರುವ ಪಂದ್ಯಗಳೆಲ್ಲ ಸುಗಮವಾಗಿ ನಡೆಯಲಿ, ಕ್ರೀಡಾಭಿಮಾನಿಗಳಿಗೆ ಒಳ್ಳೆಯದಾಗಲಿ ಎಂದು ಅವರು ಪ್ರಾರ್ಥಿಸಿದರು.
ಕ್ರಿಕೆಟ್‌ಗಾಗಿ ಈ ಪೂಜೆ ಮಾಡಲಾಗುತ್ತಿದೆ ಎಂದು ಕೆಎಸ್‌ಸಿಎ ನೂತನ ಪದಾಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಅನಾಹುತಗಳು ನಡೆಯದೆ, ಪಂದ್ಯಾವಳಿ ಯಶಸ್ವಿಯಾಗಿ ನಡೆಯಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.






















