ಉಪ್ಪಿನಂಗಡಿ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ವತಿಯಿಂದ 28ನೇ ಉಚಿತ ವೈದ್ಯಕೀಯ ಶಿಬಿರವು ಉಪ್ಪಿನಂಗಡಿಯ ನಂದಿಕೇಶ್ವರ ಭಜನಾ ಮಂಡಳಿ, ನಂದಿನಿ ನಗರದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಶಿಬಿರವನ್ನು ಸತ್ಯಸಾಯಿ ಸೇವಾ ಸಮಿತಿ, ಕೆ.ಎಸ್. ಹೆಗಡೆ ವೈದ್ಯಕೀಯ ಕಾಲೇಜು ಹಾಗೂ ಯೆನೆಪೋಯ ಡೆಂಟಲ್ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀರಾಮ್ ಭಟ್ ಪಾತಾಳ ಅವರು ಉದ್ಘಾಟಿಸಿದರು.
ನಂದಿಕೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ ರಾಮನಗರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅರುಣ್ ಕುಮಾರ್ ಪುತ್ತಿಲರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲರು, ಟ್ರಸ್ಟ್ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುವ ಮೂಲಕ ಗ್ರಾಮಾಂತರ ಪ್ರದೇಶಗಳ ಬಡ ಮತ್ತು ಹಿಂದುಳಿದ ಜನರ ಆರೋಗ್ಯ ಸಂರಕ್ಷಣೆಗೆ ತನ್ನ ಕೈಲಾದ ಸೇವೆಯನ್ನು ಸಲ್ಲಿಸುತ್ತಿದೆ ಎಂದರು. ವ್ಯಕ್ತಿಯ ಆರೋಗ್ಯ ಸುಸ್ಥಿರವಾಗಿದ್ದರೆ ಮಾತ್ರ ಸಮಾಜವೂ ಆರೋಗ್ಯಕರವಾಗಿರಲು ಸಾಧ್ಯ. ಈ ಉದ್ದೇಶದಿಂದ ಪ್ರತೀ ತಿಂಗಳು ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಲಾಗುತ್ತಿದೆ. ಜನಸೇವೆಯೇ ಟ್ರಸ್ಟ್‌ನ ಮೂಲ ಧ್ಯೇಯವಾಗಿದ್ದು, ಮುಂದೆಯೂ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಲಾಗುವುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ನೆಕ್ಕಿಲಾಡಿ, ಸತ್ಯಸಾಯಿ ಸೇವಾ ಸಮಿತಿಯ ದೇವಾನಂದ ಶೆಟ್ಟಿ, ಯೆನೆಪೋಯ ಡೆಂಟಲ್ ಕಾಲೇಜಿನ ಅಪೂರ್ವ ಕೋಟ್ಯಾನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇಂದಿನ ವೈದ್ಯಕೀಯ ಶಿಬಿರದಲ್ಲಿ ಸುಮಾರು 200ಕ್ಕೂ ಹೆಚ್ಚು ಫಲಾನುಭವಿಗಳು ವಿವಿಧ ಆರೋಗ್ಯ ಸೇವೆಗಳ ಪ್ರಯೋಜನವನ್ನು ಪಡೆದುಕೊಂಡರು. ಸ್ಥಳೀಯ ಸಾರ್ವಜನಿಕರಿಂದ ಶಿಬಿರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.






















