ಪುತ್ತೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಕಳ್ಳತನ, ದರೋಡೆ, ಸುಲಿಗೆ ಪ್ರಕರಣಗಳು ದಿನನಿತ್ಯದ ಸಂಗತಿಗಳಾಗಿವೆ. ಅಪರಾಧಿಗಳು ಯಾವುದೇ ಭಯವಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುತ್ತಿದ್ದು, ಜನಸಾಮಾನ್ಯರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ.
ಈ ಕುರಿತು ತೀವ್ರವಾಗಿ ಪ್ರತಿಕ್ರಿಯಿಸಿದ ಹಿಂದು ಸಂಘಟನೆಯ ಮುಖಂಡ ಅರುಣ್ ಪುತ್ತಿಲ “ರಾಜ್ಯದಲ್ಲಿ ಕಾನೂನು ಎಂಬುದೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದು ಆಡಳಿತದ ಸಂಪೂರ್ಣ ವೈಫಲ್ಯ ಅಪರಾಧಿಗಳಿಗೆ ಮುಕ್ತ ಲೈಸೆನ್ಸ್ ನೀಡಿದಂತಾಗಿದೆ. ಸರ್ಕಾರ ಜನರ ಜೀವ ಆಸ್ತಿ ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದೆ” ಎಂದು ಕಿಡಿಕಾರಿದರು.
ಪೊಲೀಸರು ಅಪರಾಧಿಗಳೊಂದಿಗೆ ಕೈಜೋಡಿಸುತ್ತಿದ್ದಾರೆ, ಜೈಲುಗಳಲ್ಲಿ ಕೈದಿಗಳಿಗೆ ಫೋನ್/ಮಾದಕ ವಸ್ತುಗಳು ಲಭ್ಯ ಎಂಬ ಆರೋಪ ಸಹ ಪ್ರಸಾರವಾಗಿದೆ. ಕಳ್ಳರು, ದರೋಡೆಕೋರರು, ಸುಲಿಗೆಗೈಯುವವರು ನಿರ್ಭಯವಾಗಿ ತಿರುಗಾಡುತ್ತಿದ್ದರೆ, ಪೊಲೀಸ್ ಇಲಾಖೆ ಮೌನ ವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಪರಾಧಿಗಳಿಗೆ ರಾಜಕೀಯ ರಕ್ಷಣೆ ದೊರೆಯುತ್ತಿದೆಯೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಇಂತಹ ಸ್ಥಿತಿಗೆ ಸರ್ಕಾರವೇ ನೇರ ಹೊಣೆ” ಎಂದು ಅವರು ಆರೋಪಿಸಿದರು.
ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ, ಜನರ ಆಕ್ರೋಶ ಸ್ಫೋಟಗೊಳ್ಳಲಿದೆ. ಕೇವಲ ಭರವಸೆಗಳಿಂದಲ್ಲ, ಕಠಿಣ ಕ್ರಮಗಳಿಂದ ಮಾತ್ರ ಕಾನೂನು ಸುವ್ಯವಸ್ಥೆ ಮರುಸ್ಥಾಪನೆ ಸಾಧ್ಯ. ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು, ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಅರುಣ್ ಪುತ್ತಿಲ ಆಗ್ರಹಿಸಿದರು.
ಜನರ ಸುರಕ್ಷತೆ ಖಚಿತಪಡಿಸಲು ಪೊಲೀಸ್ ಗಸ್ತು ಹೆಚ್ಚಿಸಬೇಕು, ಅಪರಾಧ ಜಾಲವನ್ನು ಬೇರುಸಮೇತ ಕಿತ್ತೊಗೆಯಬೇಕು. ಇಲ್ಲದಿದ್ದರೆ ಜನಸಾಮಾನ್ಯರು ರಸ್ತೆಗಿಳಿದು ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅವರು ಎಚ್ಚರಿಸಿದರು






















