ಪುತ್ತೂರು: ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಒಟ್ಟು ಎಂಟು ಜಿಲ್ಲೆಗಳನ್ನು ಒಳಗೊಂಡ ಮೈಸೂರು ವಿಭಾಗದ ಮಟ್ಟದ ಕೃಷಿ ಮೇಳ ಮತ್ತು ಸಸ್ಯ ಜಾತ್ರೆಯನ್ನು ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ಆಯೋಜಿಸಲಾಗಿದ್ದು. ಜ.10 ರಿಂದ 12ರ ತನಕ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಗದ್ದೆಯಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಟಿಯಲ್ಲಿ ದ.ಕ.ಜಿಲ್ಲಾ ಕೃಷಿಕ ಸಮಾಜ ಮತ್ತು ಕೃಷಿ ಮೇಳದ ಅಧ್ಯಕ್ಷ ವಿಜಯ ಕುಮಾರ್ ರೈ ಅವರು ಮಾತನಾಡಿ, ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜ ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್, ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಅರಿವು ಕೇಂದ್ರ, ರೈತ ಕುಡ್ಲ ಪ್ರತಿಷ್ಠಾನದ ಸಹಯೋಗದಲ್ಲಿ ಕೃಷಿ ಮೇಳ ಮತ್ತು ಸಸ್ಯ ಜಾತ್ರೆ ನಡೆಯಲಿದ್ದು, ಸುಮಾರು 200ಕ್ಕೂ ಮಿಕ್ಕಿ ಕೃಷಿ, ಇನ್ನಿತರ ಚಟುವಟಿಕೆಗಳ ಪ್ರದರ್ಶನ ಮತ್ತು ವ್ಯಾಪಾರ ಮಳಿಗೆಗಳ ಸ್ಟಾಲ್‌ಗಳು ಇರಲಿದೆ, ಮೇಳದಲ್ಲಿ ಮಾಹಿತಿ ಗೋಷ್ಠಿಗಳು, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು ಸುಮಾರು 2 ಲಕ್ಷಕ್ಕೂ ಮಿಕ್ಕಿ ಕೃಷಿಕರು ಸಾರ್ವಜನಿಕರು ಭಾಗವಹಿಸಲಿದ್ದಾರೆ.
ಜ.10ರಂದು ಬೆಳಗ್ಗೆ ಗಂಟೆ 10ಕ್ಕೆ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಅಧ್ಯಕ್ಷತೆಯಲ್ಲಿ ಕೃಷಿ ಸಚಿವರು ಮತ್ತು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷರೂ ಆಗಿರುವ ಚೆಲುವರಾಯ ಸ್ವಾಮಿ ಅವರು ಕೃಷಿಮೇಳ ಮತ್ತು ಜಾತ್ರೆಯನ್ನು ಉದ್ಘಾಟಿಸಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷ ನಗರದ ಮಹದೇವಪ್ಪ ಅವರು ಕೃಷಿ ಧ್ವಜಾರೋಹಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾ| ಬ್ರಿಜೇಶ್ ಚೌಟ, ರಾಜ್ಯ ಸಭಾ ಸದಸ್ಯ ಡಾ. ಡಿ.ವಿರೇಂದ್ರ ಹೆಗಡೆ, ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಶಾಸಕರುಗಳು, ವಿಧಾನಪರಿಷತ್ ಸದಸ್ಯರುಗಳು ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಜ.10ರಂದು ಮೇಳದಲ್ಲಿ ಮಧ್ಯಾಹ್ನ 2.30 ರಿಂದ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಮಾಹಿತಿ ಗೋಷ್ಠಿಯಲ್ಲಿ ಗೇರುಕೃಷಿ – ತಾಂತ್ರಿಕತೆಗಳ ಕುರಿತು ಡಿ.ಸಿ.ಆರ್ ವಿಜ್ಞಾನಿ ಮತ್ತು ಪ್ರಶಸ್ತಿ ಪುರಸ್ಕೃತ ಗೇರುಕೃಷಿಕ ಕಡಮಜಲು ಸುಭಾಷ್ ರೈ ಅವರು ಮಾಹಿತಿ ನೀಡಲಿದ್ದಾರೆ. ಜ.11ರಂದು ಬೆಳಿಗ್ಗೆ ಗಂಟೆ 10 ರಿಂದ ಅಡಿಕೆ ಮತ್ತು ಕಾಳುಮೆಣಸಿನ ಬೆಳೆಗಳಲ್ಲಿ ನೂತನ ತಾಂತ್ರಿಕತೆಗಳು ಮತ್ತು ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಸಮರ್ಪಕ ಬಳಕೆ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಸಿಪಿಸಿಆರ್‌ಐ ವಿಟ್ಲದ ವಿಜ್ಞಾನಿಗಳು, ಕಾಳುಮೆಣಸು ಕೃಷಿಕ ಸಾಧಕ ಸುರೇಶ್ ಭಟ್ ಬಲ್ನಾಡು, ಪಲ್ಲತ್ತಡ್ಕ ಅನಂತರಾಮ ಕೃಷ್ಣ, ಮಾಹಿತಿ ನೀಡಲಿದ್ದರೆ. ಮದ್ಯಾಹ್ನ ಗಂಟೆ 2.30ರಿಂದ ಕಾಫಿ, ಹಣ್ಣು ಹಾಗು ಇನ್ನಿತರ ಪರ್ಯಾಯ ಬೆಳೆಗಳ ಕುರಿತು ಚಟ್ಟಳ್ಳಿ ಕಾಫಿಬೋರ್ಡ್‌ನ ವಿಜ್ಞಾನಿ, ಕಾಫಿ ಬೆಳೆ, ಕಾಳುಮೆಣಸು ಕೃಷಿಕ ಅಜಿತ್ ಪ್ರಸಾದ್ ರೈ, ಚಂದ್ರಶೇಖರ ತಾಳ್ತಜೆ, ಹಣ್ಣಿನ ಬೆಳೆಗಳ ಕೃಷಿಕ ಕೆ.ಪಿ.ಮಹಮ್ಮದ್ ಸಾದಿಕ್ ಅವರು ಮಾಹಿತಿ ನೀಡಲಿದ್ದಾರೆ. ಜ.12ರಂದು ಬೆಳಗ್ಗೆ ಗಂಟೆ 10 ರಿಂದ ಭತ್ತದ ಕೃಷಿ ಮತ್ತು ಮಣ್ಣು ಪರೀಕ್ಷೆಯ ಮಹತ್ವದ ಕುರಿತು ಮಂಗಳೂರು ಕೆವಿಕೆ ವಿಜ್ಞಾನಿಗಳು, ಸಾವಯವ ಭತ್ತದ ಕೃಷಿಕ ಎ ಪಿ ಸದಾಶಿವ ಮರಿಕೆ ಅವರು ಸಂಪನ್ಮೂಲ ವಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿಜಯ ಕುಮಾರ್ ರೈ ತಿಳಿಸಿದರು.
ಜ.10ರಂದು ಬೆಳಿಗ್ಗೆ ಗಂಟೆ9.30 ರಿಂದ ಜಯದೀಪ್ ರೈ ಕೋರಂಗ ಸಾರಥ್ಯದ ಟೀಂ ಮಂಜುಶ್ರೀ ತಂಡದಿಂದ ಗಾನ ವೈಭವ, ಸಂಜೆ ಗಂಟೆ 5.30 ರಿಂದ ನೃತ್ಯ ಸಂಗಮ ಮತ್ತು ಮಂಗಳೂರು ಗಾನ ನೃತ್ಯ ಅಕಾಡೆಮಿಯಿಂದ ನೃತ್ಯರೂಪಕ ‘ಸತ್ಯಮೇವ ಜಯತೇ’ ನಡೆಯಲಿದೆ. ಜ.11ರಂದು ಸಂಜೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಗುರುಪ್ರಿಯಾ ಶಿವಾನಂದ ಕಾಮತ್ ನಿರ್ದೇಶನದಲ್ಲಿ ಗಾಯಕ, ನಿರೂಪಕರ ಸಮ್ಮಿಲನ ಮತ್ತು ಗುರುಕುಲ ಕಲಾಕೇಂದ್ರ ಪುರುಷರಕಟ್ಟೆ ಇದರ ವಿದ್ಯಾರ್ಥಿಗಳಿಂದ ಗಾನ ನೃತ್ಯ ಸಂಭ್ರಮ ನಡೆಯಲಿದೆ ಎಂದು ವಿಜಯ ಕುಮಾರ್ ರೈ ಅವರು ತಿಳಿಸಿದರು.
ಜ.12ರಂದು ಮಧ್ಯಾಹ್ನ ಗಂಟೆ 2.30ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ರಮಾನಾಥ ರೈ, ಆಳ್ವಾಸ್ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ, ಮಾಜಿ ಶಾಸಕ ಸಂಜೀವ ಮಠಂದೂರು, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಕೆ.ಎಂ.ಎಫ್ ನಿರ್ದೇಶಕ ಎಸ್.ಬಿ.ಜಯರಾಮ ರೈ ಸಹಿತ ಹಲವಾರು ಮಂದಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿಜಯ ಕುಮಾರ್ ರೈ ಹೇಳಿದರು.
ಕೃಷಿ ಮೇಳ ಮತ್ತು ಸಸ್ಯ ಜಾತ್ರೆಯಲ್ಲಿ ಕೃಷಿಗೆ ಸಂಬಂಧಿಸಿದ ಹಲವು ಪ್ರದರ್ಶನಗಳು ಇವೆ. ಸುಮಾರು 40 ಮಳಿಗೆಗಳಲ್ಲಿ ವಿವಿಧ ಇಲಾಖೆಗಳ ಮಾಹಿತಿ ಪ್ರದರ್ಶನಗಳು ಇರಲಿದೆ. ಜಾನುವಾರು ಪ್ರದರ್ಶನ ನಡೆಯಲಿದೆ. ಯಂತ್ರೋಪಕರಣ, ಸಸಿಗಳ ವಿವಿಧ ತಳಿಯ ಬೀಜಗಳು, ರಸಗೊಬ್ಬರಗಳ ಮಳಿಗೆಗಳಿರಲಿದೆ. ಮಡಿಕೆ ತಯಾರಿಕೆ, ಬೆಲ್ಲ ತಯಾರಿ, ಕೃಷಿ ಉಪಕರಣಕ್ಕೆ ಬೇಕಾದ ಕತ್ತಿ ತಯಾರಿಕೆಯ ಪ್ರಾತ್ಯಕ್ಷಿಕೆ ಸಹಿತ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆ. ಆರಂಭದ ದಿನ ಚಿತ್ರಕಲಾ ಸ್ಪರ್ಧೆಗಳು ನಡೆಯಲಿದೆ. ಅದೇ ರೀತಿ ಹಾಲು ಕರೆಯುವ ಸ್ಪರ್ಧೆಗಳು ನಡೆಯಲಿದೆ ಎಂದು ದ.ಕ.ಜಿಲ್ಲಾ ಕೃಷಿಕ ಸಮಾಜ ಮತ್ತು ಕೃಷಿಮೇಳದ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಉಪಾಧ್ಯಕ್ಷ ಚಂದ್ರಕೋಲ್ಚಾರ್, ಕೋಶಾಧಿಕಾರಿ ಕುಸುಮಾಧರ ಎ.ಟಿ, ಜಿಲ್ಲಾ ನಿರ್ದೇಶಕ ಮಹೇಶ್ ಕೆ ಸವಣೂರು ಉಪಸ್ಥಿತರಿದ್ದರು.
ವಿವಿಧ ತಾಲೂಕುಗಳಿಂದ ಆಯ್ಕೆ ಮಾಡಿದ ಅತ್ಯುತ್ತಮ ಕೃಷಿ ಸಾಧಕರನ್ನು ಸನ್ಮಾನಿಸಲಾಗುವುದು. ಪುತ್ತೂರು ತಾಲೂಕಿಗೆ ಸಂಬಂಧಿಸಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಬಂಟ್ವಾಳ ತಾಲೂಕಿನ ಕೆ.ಪ್ರೇಮನಾಥ ಶೆಟ್ಟಿ ಕೊರ್ಯ ಬಾಳ್ತಿಲ, ಉಳ್ಳಾಲ ತಾಲೂಕಿನ ಜಿ.ಟಿ.ರಾಜಾರಾಮ ಭಟ್, ಬೆಳ್ತಂಗಡಿ ತಾಲೂಕಿನ ಕಾಂತಪ್ಪ ಪೂಜಾರಿ, ಕಡಬ ತಾಲೂಕಿನ ಅರವಿಂದ ಮುಳ್ಳಂಕೊಚ್ಚಿ, ಸುಳ್ಯ ತಾಲೂಕಿನ ಡಿ.ಎನ್. ಚಂದ್ರಶೇಖರ, ಮಂಗಳೂರು ತಾಲೂಕಿನ ಪ್ರತಿಭಾ ಹೆಗ್ಡೆ, ಮುಲ್ಕಿ ತಾಲೂಕಿನ ಪ್ರಮೀಳಾ ಎನ್ ಶೆಟ್ಟಿ, ಮೂಡಬಿದ್ರೆ ತಾಲೂಕಿನ ನಾಗಪ್ಪ ಪೂಜಾರಿಯವರನ್ನು, ಅತ್ಯುತ್ತಮ ಕೃಷಿ ಕೂಲಿ ಕಾರ್ಮಿಕ ಪುರಸ್ಕಾರವಾಗಿ ಬಂಟ್ವಾಳ ತಾಲೂಕಿನ ವೆಂಕಪ್ಪ ಬಿ ಗೋಳ್ತಮಜಲು, ಬೆಳ್ತಂಗಡಿ ತಾಲೂಕಿನ ಲಿಂಗಪ್ಪ ಮಡಿವಾಳ, ಪುತ್ತೂರು ತಾಲೂಕಿನ ಮೋಹನ್‌ದಾಸ್ ಕಾಮತ್, ಕಡಬ ತಾಲೂಕಿನ ಶೀನಪ್ಪ ಪೂಜಾರಿ ಹೊಸಮಠ, ಸುಳ್ಯ ತಾಲೂಕಿನ ತೀರ್ಥರಾಮ ಬೈತ್ತಡ್ಕ ಹಾಗು ಕೃಷಿ ಸಲಕರಣೆ ಉತ್ಪಾದಕ ಉದ್ಯಮಿ ಪುರಸ್ಕಾರದಲ್ಲಿ ಎಸ್.ಆರ್.ಕೆ.ಲ್ಯಾಡರ್‍ಸ್‌ನ ಮಾಲಕ ಕೇಶವ ಗೌಡ ಅಮೈಗುತ್ತು, ಆಕರ್ಷಣ್ ಇಡಂಸ್ಟ್ರೀಸ್‌ನ ಮಾಲಕ ಕೆ.ಪಿ.ಮಹಮ್ಮದ್ ಸಾದಿಕ್, ಬಂಇಲ ಎಸ್.ಎಂ. ಇಂಡಸ್ಟ್ರೀಸ್‌ನ ಮಾಲಕ ಪುರುಷೋತ್ತಮ ಬಿ.ಎಸ್ ಅವರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭ ಜಿಲ್ಲಾ ಕೃಷಿಕ ಸಮಾಜದ ಹಿರಿಯ ಪದಾಧಿಕಾರಿಗಳಾದ ಸಂಪತ್ ಸಾಮ್ರಾಜ್ಯ, ಪಿ.ಕೆ.ರಾಜುಪೂಜಾರಿ, ಪದ್ಮರಾಜ ಬಲ್ಲಾಳ್, ಕೆ.ಕೃಷ್ಣರಾಜ್ ಹೆಗಡೆ ಅವರನ್ನು ಗೌರವಿಸಲಾಗುವುದು ಎಂದು ವಿಜಯ ಕುಮಾರ್ ರೈ ಹೇಳಿದರು

























