ಮಂಗಳೂರು, ಮೇ 2: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲೊಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹಿಂದೂಯೇತರ ಅಧಿಕಾರಿಯನ್ನು ನೇಮಿಸಿದ ಆರೋಪ ಕೇಳಿಬಂದಿದೆ. ಆದರೆ, ಮಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಈ ಆರೋಪವನ್ನು ಅಲ್ಲಗಳೆದಿದ್ದು, ಇದು ಬಿಜೆಪಿಯ ಸುಳ್ಳು ಸುದ್ದಿ ಎಂದಿದ್ದಾರೆ. ದೇಗುಲದ ನೂತನ ಎಇಒ ಆಗಿ ಏಸುರಾಜ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿತ್ತು. ಏಸುರಾಜ್ ಹಿಂದೂವೇ ಅಥವಾ ಮತಾಂತರಗೊಂಡ ಕ್ರಿಶ್ಚಿಯನ್ನರೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು.
ಏಸುರಾಜ್ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ವಿಹೆಚ್ಪಿ ಸಂದೇಶ ಪ್ರಕಟಿಸಿತ್ತು.
ಏಸುರಾಜ್ ಅಧಿಕಾರ ಸ್ವೀಕಾರ ಗೊಂದಲದ ಬಗ್ಗೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸ್ಪಷ್ಟನೆ ನೀಡಿರುವ ರಾಮಲಿಂಗಾ ರೆಡ್ಡಿ, ಇದು ಬಿಜೆಪಿಯ ಮತ್ತೊಂದು ಫೇಕ್ ವಾಟ್ಸ್ಆ್ಯಪ್ ಯುನಿವರ್ಸಿಟಿಯ ಸುಳ್ಳು ಸುದ್ದಿ ಎಂದು ಟೀಕಿಸಿದ್ದಾರೆ.
ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೇಮಕವಾಗಿರುವ ಎಇಓ ಏಸುರಾಜ್ ಅವರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿರುವವರೆಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಇದು ಕರ್ನಾಟಕ ಬಿಜೆಪಿಯ ಮತ್ತೊಂದು ಸುಳ್ಳು ಹಬ್ಬಿಸುವ ಸೋಶಿಯಲ್ ಮೀಡಿಯಾ ವಾಟ್ಸಾಪ್ ಫೇಕ್ ಯುನಿವರ್ಸಿಟಿಯ ಆಟವಾಗಿದೆ. ಅವರು ಹಿಂದುಳಿದ ಜಾತಿಗೆ ಸೇರಿದವರಾಗಿದ್ದು, ದಾಖಲೆಗಳು ಇಲ್ಲಿವೆ ಎಂದು ದಾಖಲೆಗಳನ್ನು ಲಗತ್ತಿಸಿದ್ದಾರೆ.