ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಶರವೇಗದ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋ ರೂಟ್ 111 ರನ್ಗಳ ಇನಿಂಗ್ಸ್ ಆಡಿದರು. ಇನ್ನು ಐದನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಹ್ಯಾರಿ ಬ್ರೂಕ್ ಲಂಕಾ ಬೌಲರ್ಗಳನ್ನು ಚೆಂಡಾಡಿದರು.
ಕ್ರೀಸ್ಗೆ ಆಗಮಿಸುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಹ್ಯಾರಿ ಬ್ರೂಕ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಈ ಮೂಲಕ ಕೇವಲ 57 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಶ್ರೀಲಂಕಾ ಪಿಚ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡರು. ಈ ಪಟ್ಟಿಯಲ್ಲಿ ಪಾಕಿಸ್ತಾನದ ಶಾಹಿದ್ ಅಫ್ರಿದಿ (54 ಎಸೆತಗಳು) ಅಗ್ರಸ್ಥಾನದಲ್ಲಿದ್ದಾರೆ.
ಇನ್ನು ಶತಕದ ಬಳಿಕ ಕೂಡ ಆರ್ಭಟ ಮುಂದುವರೆಸಿದ ಹ್ಯಾರಿ ಬ್ರೂಕ್ 66 ಎಸೆತಗಳಲ್ಲಿ 9 ಭರ್ಜರಿ ಸಿಕ್ಸರ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 136 ರನ್ ಬಾರಿಸಿದರು. ಈ 9 ಸಿಕ್ಸರ್ಗಳೊಂದಿಗೆ ಶ್ರೀಲಂಕಾದಲ್ಲಿ ಏಕದಿನ ಇನಿಂಗ್ಸ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಬ್ರೂಕ್ ತಮ್ಮದಾಗಿಸಿಕೊಂಡರು.
ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾ ಬ್ಯಾಟರ್ ಪಾತುಮ್ ನಿಸ್ಸಂಕಾ ಹೆಸರಿನಲ್ಲಿತ್ತು. 2024 ರಲ್ಲಿ ಅಫ್ಘಾನಿಸ್ತಾನ್ ವಿರುದ್ಧ ತವರಿನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಪಾತುಮ್ ನಿಸ್ಸಂಕಾ ಬರೋಬ್ಬರಿ 8 ಸಿಕ್ಸ್ ಸಿಡಿಸಿ ಈ ಭರ್ಜರಿ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಬ್ರೂಕ್ ಮುರಿದಿದ್ದಾರೆ.
ಶ್ರೀಲಂಕಾ ವಿರುದ್ಧವೇ ಅವರ ನೆಲದಲ್ಲಿ ಅಬ್ಬರಿಸುವ ಮೂಲಕ ಹ್ಯಾರಿ ಬ್ರೂಕ್ ಬರೋಬ್ಬರಿ 8 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಈ ಮೂಲಕ ಲಂಕಾ ಪಿಚ್ನಲ್ಲಿ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಇನಿಂಗ್ಸ್ವೊಂದರಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.


























