ಮಂಗಳೂರಿನ ತಣ್ಣೀರುಬಾವಿ ಸಮುದ್ರ ಕಿನಾರೆಯಲ್ಲಿ ದೇಶದ 13ನೇ ಬ್ಲೂಫ್ಲ್ಯಾಗ್ ಬೀಚ್ ಸಿದ್ಧಗೊಂಡಿದ್ದು, ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಒಂದೆಡೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದರೆ, ಶುಲ್ಕ ನಿಗದಿಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಪ್ರವೇಶ ದರ ವಸೂಲಿ ಆರಂಭಿಸಲಾಗಿದೆ. ಪ್ರವಾಸಿಗರು ಆಗಮಿಸುತ್ತಿದ್ದು, ಶನಿವಾರ, ಭಾನುವಾರ ಸಂಖ್ಯೆ ಹೆಚ್ಚಿರುತ್ತದೆ. ಸ್ಮಾರ್ಟ್ ಸಿಟಿ ಯೋಜನೆಯಿಂದ ಪ್ರವೇಶ ದ್ವಾರ ನಿರ್ಮಾಣ ನಡೆಯುತ್ತಿದೆ. ಅದು ಪೂರ್ಣಗೊಂಡ ಬಳಿಕ ಮತ್ತಷ್ಟು ಆಕರ್ಷಣೀಯವಾಗಲಿದೆ,” ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಾಣಿಕ್ಯ.
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ತಣ್ಣೀರುಬಾವಿ ಬ್ಲೂಫ್ಲ್ಯಾಗ್ ಕಡಲ ತೀರ ನಿರ್ವಹಣೆ ಬಗ್ಗೆ ಚರ್ಚೆ ನಡೆದಿದೆ. ಶುಲ್ಕ ವಸೂಲಾತಿಗೆ ಸಿಬ್ಬಂದಿ ನೇಮಕದ ಟೆಂಡರ್ ಪ್ರಕ್ರಿಯೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದ್ದು, ಮೆ.ಬಿವಿಜೆ ಇಂಡಿಯಾ ಲಿ. ಸಿಬ್ಬಂದಿಗೆ ತಾತ್ಕಾಲಿಕವಾಗಿ ಶುಲ್ಕ ವಸೂಲಿ ಮಾಡುವಂತೆ ನಿರ್ದೇಶನ ನೀಡಲಾಗಿದೆ.
ಈ ಬೀಚ್ ತುಂಬಾ ಕ್ಲೀನ್ ಇದೆ. ಒಳ್ಳೆಯ ನಿರ್ವಹಣೆ ಮಾಡಲಾಗುತ್ತಿದೆ. ಹಣ ಕೊಟ್ಟರೂ ಮೋಸವಿಲ್ಲ. ಸರಕಾರದಿಂದ ಇನ್ನಷ್ಟು ಉತ್ತಮ ಸೌಲಭ್ಯ ಕಲ್ಪಿಸಬೇಕು ಪ್ರವಾಸಿ
ಪೂನಾ ಮೂಲದ ಬಿವಿಜಿ ಇಂಡಿಯಾ ಲಿ. ಕಂಪನಿಯು 7.56 ಕೋಟಿ ರೂ. ಮೊತ್ತದಲ್ಲಿ ಬ್ಲೂಫ್ಲ್ಯಾಗ್ ಬೀಚ್ ಕಾಮಗಾರಿ ನಡೆಸಿದ್ದು, ಸ್ಮಾರ್ಟ್ ಸಿಟಿ ಯೋಜನೆಯಿಂದ ಪ್ರವೇಶ ದ್ವಾರ ನಿರ್ಮಿಸಲಾಗುತ್ತಿದೆ. ಒಟ್ಟು 1 ಕಿ.ಮೀ. ವ್ಯಾಪ್ತಿಯ ಬ್ಲೂಫ್ಲ್ಯಾಗ್ ಬೀಚ್ನಲ್ಲಿ ಶುಚಿತ್ವ ಕಾಪಾಡಲು ಘನತ್ಯಾಜ್ಯ ಸಂಸ್ಕರಣೆ ಘಟಕ, ಬೂದು ನೀರು ಸಂಸ್ಕರಣೆ ಘಟಕ ನಿರ್ಮಿಸಲಾಗಿದೆ. ಶೌಚಾಲಯ, ಬಟ್ಟೆ ಬದಲಾಯಿಸುವ ಕೊಠಡಿ, ವುಡ್ ಪಾಲಿಮರ್ ಕಂಪೋಸ್ಡ್ ಪಾತ್ ವೇ, ಪ್ರಥಮ ಚಿಕಿತ್ಸೆ ಕೊಠಡಿ, ಸಿಸಿಟಿವಿ ನಿಯಂತ್ರಣ ಕೊಠಡಿ, ಐದು ಕಡೆ ಕ್ಯಾಮೆರಾ, ಕುಡಿಯುವ ನೀರಿನ ವ್ಯವಸ್ಥೆ, ಆರಾಮ ಕುರ್ಚಿಗಳನ್ನು ಹಾಕಲಾಗಿದೆ.
ದಕ್ಷಿಣ ಕನ್ನಡ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ನಿಗದಿಪಡಿಸಿದ ದರ
.ಪ್ರವೇಶ ದರ(13 ವರ್ಷ ಮೇಲ್ಪಟ್ಟವರು): 20 ರೂ.
.ಪ್ರವೇಶ ದರ(13 ವರ್ಷ ಕೆಳಗಿನವರಿಗೆ): 10 ರೂ.
- ಫೊಟೋ ಶೂಟ್: 1,000 ರೂ.
- ಡ್ರೋನ್ ಸಹಿತ ಫೊಟೋ ಶೂಟ್: 2,000 ರೂ.
- ಫಿಲ್ಮ್ ಶೂಟಿಂಗ್ (ತುಳು ಭಾಷೆ): 5,000 ರೂ.
- ಫಿಲ್ಮ್ ಶೂಟಿಂಗ್ (ಇತರ ಭಾಷೆ): 10,000 ರೂ.
- ಮದುವೆ ಸಮಾರಂಭ: 15,000 ರೂ.
- ಕಮರ್ಷಿಯಲ್ ಕಾರ್ಯಕ್ರಮ: 20,000 ರೂ.
- ಶವರ್ ಬಾತ್ (5 ನಿಮಿಷ): 10 ರೂ.
- ಪಾರ್ಕಿಂಗ್ (ದ್ವಿಚಕ್ರ): 10 ರೂ.
- ಪಾರ್ಕಿಂಗ್ (ನಾಲ್ಕು ಚಕ್ರ): 20 ರೂ.
- ಪಾರ್ಕಿಂಗ್(ಆರು ಚಕ್ರ): 50 ರೂ.
- ಶೌಚಾಲಯ: 5 ರೂ.
- ರಿಕ್ಲೈನರ್ ಚೈರ್(ಒಂದು ಗಂಟೆ): 100 ರೂ.
ತಣ್ಣೀರುಬಾವಿಯಲ್ಲಿ ಬ್ಲೂಫ್ಲ್ಯಾಗ್ ಬೀಚ್ ಕಾಮಗಾರಿ ಮುಗಿದು, ಪ್ರವೇಶ ದರ ನಿಗದಿ ಮಾಡಲಾಗಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಸರಿಪಡಿಸುತ್ತೇವೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಾದ ಅಧಿಕಾರಿ ಮಾಣಿಕ್ಯ ಭರವಸೆ ನೀಡಿದ್ದಾರೆ.