ಪುತ್ತೂರು: ಬನ್ನೂರಿನ ಆನೆಮಜಲಿನಲ್ಲಿ ನಿರ್ಮಾಣಗೊಂಡ ನೂತನ ನ್ಯಾಯಾಲಯ ಸಂಕೀರ್ಣ ಜ. 31ರಂದು ಉದ್ಘಾಟನೆಗೊಳ್ಳಲಿದ್ದು, ಆಂಧ್ರಪ್ರದೇಶದ ರಾಜ್ಯಪಾಲ, ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ್ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ನ್ಯಾಯಾಂಗ ದಕ್ಷಿಣ ಕನ್ನಡ, ಲೋಕೋಪಯೋಗಿ ಇಲಾಖೆ ದಕ್ಷಿಣ ಕನ್ನಡ ಮತ್ತು ಪುತ್ತೂರು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳೂ, ದಕ್ಷಿಣ ಕನ್ನಡ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳೂ ಆದ ನ್ಯಾ.ಮೂ. ಎಚ್.ಟಿ. ನರೇಂದ್ರ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಹೈಕೋರ್ಟ್ ನ್ಯಾಯಮೂರ್ತಿಳಾದ ಮಹಮ್ಮದ್ ನವಾಜ್, ಅಶೋಕ್ ಎಸ್. ಕಿಣಗಿ, ಎಸ್. ವಿಶ್ವಜಿತ್ ಶೆಟ್ಟಿ, ಕೆ. ರಾಜೇಶ್ ರೈ, ತ್ಯಾಗರಾಜ್ ಎನ್.ಇನವಳ್ಳಿ, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ರಾಜ್ಯ ಕಾನೂನು ಸಚಿವ ಎಚ್.ಕೆ. ಪಾಟೀಲ್, ರಾಜ್ಯ ಲೋಕೋಪಯೋಗಿ ಖಾತೆಯ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅತಿಥಿಗಳಾಗಿರುತ್ತಾರೆ. ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿಗಳಾದ ಟಿ.ಜಿ. ಶಿವಶಂಕರೇ ಗೌಡ, ಸಂಸದ ಕ್ಯಾ.ಬ್ರಜೇಶ್ ಚೌಟ, ಶಾಸಕ ಅಶೋಕ್ ರೈ, ಸುಪ್ರೀಂ ಕೋರ್ಟಿನ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್, ಹೈಕೋರ್ಟಿನ ಮಹಾ ವಿಲೇಖನಾಧಿಕಾರಿ ಕೆ.ಎಸ್. ಭರತ್ ಕುಮಾರ್, ರಾಜ್ಯ ಸರಕಾರದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ., ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಪಿ.ಪಿ. ಹೆಗ್ಡೆ ವಿಶೇಷ ಆಹ್ವಾನಿತರಾಗಿರುತ್ತಾರೆ ಎಂದರು.
ಮಧ್ಯಾಹ್ನ 2.45ಕ್ಕೆ ಕೋರ್ಟ್ ಕಲಾಪಗಳು ನೂತನ ಸಂಕೀರ್ಣದಲ್ಲೇ ಆರಂಭಗೊಳ್ಳಲಿದೆ. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಅಗತ್ಯ ದಾಖಲೆಗಳ ಸ್ಥಳಾಂತರ ಕಾರ್ಯವೂ ನಡೆದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನ್ಯಾಯಾಧೀಶರುಗಳಾದ ಸರಿತಾ ಡಿ., ಪ್ರಕೃತಿ ಕಲ್ಯಾಣಪುರ, ದೇವರಾಜ್, ಶಿವಣ್ಣ ಎಚ್.ಆರ್., ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ, ಉಪಾಧ್ಯಕ್ಷ ಮೋನಪ್ಪ, ಕೋಶಾಧಿಕಾರಿ ಮಹೇಶ್ ಸವಣೂರು, ಮಾಜಿ ಅಧ್ಯಕ್ಷ ಮಹೇಶ್ ಕಜೆ ಉಪಸ್ಥಿತರಿದ್ದರು.
ಬೆಳ್ತಂಗಡಿ ನ್ಯಾಯಾಲಯದ ಪ್ರಕರಣಗಳಿಗೆ ಅಪೀಲ್ ಕೋರ್ಟ್ ಆಗಿ ಜಿಲ್ಲಾ ನ್ಯಾಯಾಲಯ ಇರುತ್ತದೆ. ಇದನ್ನು ಪುತ್ತೂರಿನ ಜಿಲ್ಲಾ ನ್ಯಾಯಾಲಯಕ್ಕೆ ಮಾನ್ಯ ಮಾಡಬೇಕು. ನೂತನ ನ್ಯಾಯಾಲಯ ಸಂಕೀರ್ಣ ಉಪ್ಪಿನಂಗಡಿಗೂ ಹತ್ತಿರವಾಗಿದ್ದು, ಉತ್ತಮ ರಸ್ತೆ ಸಂಪರ್ಕವೂ ಇದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ. ಜಗನ್ನಾಥ ರೈ, ಅಧ್ಯಕ್ಷರು, ವಕೀಲರ ಸಂಘ, ಪುತ್ತೂರು


























