ಪುತ್ತೂರು: ಪುತ್ತೂರಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ಶನಿವಾರ ನಡೆದ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ ಘಟಕ)ದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ ಮಾಧ್ಯಮಗಳು ಸಂವಿಧಾನದ ಆಶಯ ರಕ್ಷಣೆಗೆ ಒತ್ತು ನೀಡಬೇಕು. ಸಂವಿಧಾನ ಉಲ್ಲಂಘಿಸುವ ಶಕ್ತಿಗಳನ್ನು ತಡೆಯುವ ಕೆಲಸ ಮಾಧ್ಯಮಗಳಿಂದಾಗಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು
ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳು ಹೇಗೆ ಪ್ರಜಾಪ್ರಭುತ್ವದ ಮೂರು ಪ್ರಧಾನ ಅಂಗಗಳಾಗಿವೆಯೋ, ಮಾಧ್ಯಮಗಳು 4ನೇ ಅಂಗವಾಗಿ ಸ್ಥಾನ ಪಡೆದುಕೊಂಡಿವೆ. ಮೇಲಿನ ಮೂರು ಅಂಗಗಳು ಕೂಡ ಮಾಧ್ಯಮ ರಂಗದ ಮೇಲೆ ಗೌರವ ಹೊಂದಿದೆ. ತಾನು ಶಾಸಕನಾಗಿ ಆಯ್ಕೆಯಾದ ಮೇಲೆ ಪುತ್ತೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಆದ್ಯತೆ ನೀಡಿ ಕೆಲಸ ಮಾಡುತ್ತಾ ಬಂದಿದ್ದೇನೆ. ಇದು ಜನರಿಗೆ ತಲುಪುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಿವೆ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು ಶುಭ ಹಾರೈಸಿದರು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ. ಶಿವಾನಂದ್ ಮಾತನಾಡಿ, ಪತ್ರಕರ್ತರು ಸಮಾಜದ ಪ್ರತಿಯೊಂದು ಸಮಸ್ಯೆಗೂ ಧ್ವನಿಯಾಗುತ್ತಾರೆ. ಪತ್ರಕರ್ತರಿಗೆ ಏನಾದರೂ ಸಮಸ್ಯೆ ಉಂಟಾದಾಗ ಸಮಾಜವೇ ಅವರ ರಕ್ಷಣೆಗೆ ನಿಲ್ಲಬೇಕು. ಪತ್ರಕರ್ತರು ತಮಗೆ ಸಮಸ್ಯೆ ಬಂದಾಗ ಪೊಲೀಸರ ರಕ್ಷಣೆ ಕೋರುವ ಸನ್ನಿವೇಶ ನಿರ್ಮಾಣವಾಗಬಾರದು. ಸಾರ್ವಜನಿಕರೇ ಮುಂದೆ ನಿಂತು ಪತ್ರಕರ್ತರನ್ನು ರಕ್ಷಿಸುವ ಕೆಲಸವಾಗಬೇಕು ಎಂದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಶಿವಾನಂದ ಆಚಾರ್ಯ ಮಾತನಾಡಿ, ಮಾಧ್ಯಮಗಳು ಸತ್ಯವನ್ನು ಸಮಾಜಕ್ಕೆ ತಿಳಿಸುವ ಕೆಲಸ ಮಾಡುತ್ತಾ ಬಂದಿವೆ. ಸರಕಾರಿ ನೌಕರರ ಸೇವೆಯಂತೆ ಮಾಧ್ಯಮಗಳ ಸೇವೆಯೂ ಅತ್ಯಂತ ಪ್ರಮುಖವಾದುದು ಎಂದರು.
ಪದಗ್ರಹಣ ಸಮಾರಂಭಕ್ಕೆ ಮುನ್ನ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮಾ ರೆಡ್ಡಿ ಅವರು ಸೈಬರ್ ಮತ್ತು ಇತರ ಅಪರಾಧ ಚಟುವಟಿಕೆಗಳ ನಿಯಂತ್ರಣದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ಯುವಕರಿಗೆ ಕಾಲ ಕಾಲಕ್ಕೆ ಮಾರ್ಗದರ್ಶನ ಅಗತ್ಯ. ಕಾಲೇಜುಗಳಿಗೆ ಯಾಕೆ ತಮ್ಮನ್ನು ಕಳಿಸಿದ್ದಾರೆ ಎಂಬುದನ್ನು ವಿದ್ಯಾರ್ಥಿಗಳು ಆಗಾಗ ಅವಲೋಕನ ಮಾಡಿಕೊಳ್ಳಬೇಕು. ಇಂದಿನ ಯುವಪೀಳಿಗೆ ಅಧಃ ಪತನದತ್ತ ಸಾಗುತ್ತಿರುವುದು ಆತಂಕದ ಸಂಗತಿ ಎಂದರು.
ವಿಕಸನಕ್ಕೆ ಇರುವ ಮೊಬೈಲ್ ಮಾಧ್ಯಮವನ್ನು ವಿನಾಶಕ್ಕೆ ಬಳಸಬೇಡಿ. ಸಾಮಾಜಿಕ ಜಾಲತಾಣದ ಅತಿಯಾದ ಬಳಕೆ, ವ್ಯಾಮೋಹ ಬೇಡ, ಖಾಸಗಿ ಬದುಕನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ. ತಂತ್ರಜ್ಞಾನ ನಮ್ಮ ಒಳಿತಿಗೆ ಬಳಕೆಯಾಗಲಿ. ಅದರ ದಾಸರಾಗಬೇಡಿ. ಅಂತರ್ಜಾಲ ಬಳಸುವಲ್ಲಿ ಶಿಸ್ತು ಇರಲಿ. ಡ್ರಗ್ಸ್ ಮುಕ್ತ ರಾಜ್ಯ ನಿರ್ಮಾಣಕ್ಕಾಗಿ 42 ಇಲಾಖೆಗಳು ಕೆಲಸ ಮಾಡುತ್ತಿದ್ದು, ಯುವಜನರ ಸಹಕಾರ ಅಗತ್ಯ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಶುಭ ಹಾರೈಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಪುತ್ತೂರು ಸಂಘದ ನೂತನ ಆಡಳಿತ ಮಂಡಳಿ ಮತ್ತು ಕಾರ್ಯಕಾರಿಣಿ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಸಿದ್ದಿಕ್ ನೀರಾಜೆ ಅನಿಸಿಕೆ ವ್ಯಕ್ತಪಡಿಸಿದರು.
ಸಂಘದ ನೂತನ ಅಧ್ಯಕ್ಷ ಸುಧಾಕರ ಸುವರ್ಣ ತಿಂಗಳಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸಿ.ಶೇ. ಕಜೆಮಾರ್ ವಂದಿಸಿದರು. ಕೋಶಾಧಿಕಾರಿ ಸಂಸುದ್ದೀನ್ ಸಂಪ್ಯ ಕಾರ್ಯಕ್ರಮ ನಿರೂಪಿಸಿದರು.
ಉಪಾಧ್ಯಕ್ಷರಾದ ಕರುಣಾಕರ ರೈ ಸಿ.ಎಚ್., ಎಂ.ಎಸ್. ಭಟ್, ಕಾರ್ಯದರ್ಶಿಗಳಾದ ಅಜಿತ್ ಕುಮಾರ್, ನಝೀರ್ ಕೊಯಿಲ, ಕಾರ್ಯಕಾರಿ ಸಮಿತಿ ಸದಸ್ಯರಾದ ಮೇಘ ಪಾಲೆತ್ತಾಡಿ, ಶಶಿಧರ ರೈ ಕುತ್ಯಾಳ, ಶೇಖ್ ಜೈನುದ್ದೀನ್, ಉಮಾಶಂಕರ್, ಲೋಕೇಶ್ ಬನ್ನೂರು, ಕೃಷ್ಣ ಪ್ರಸಾದ್, ರಾಜೇಶ್ ಪಟ್ಟೆ, ಶರತ್ ಕುಮಾರ್ ಸಹಕರಿಸಿದರು.























