ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ ಅವರು ಇತ್ತೀಚೆಗೆ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದರು. ಅವರು ಗಾಯನಕ್ಕೆ ಫುಲ್ ಸ್ಟಾಪ್ ಇಟ್ಟಿದ್ದರು. ಇದು ಅಚ್ಚರಿ ಮೂಡಿಸಿತ್ತು. ಈಗ ಅರಿಜಿತ್ ಸಿಂಗ್ ಅವರು ದೊಡ್ಡ ಹೆಜ್ಜೆ ಇಡಲು ಮುಂದಾಗಿದ್ದಾರೆ ಎಂದು ವರದಿ ಆಗಿದೆ. ಅವರು ರಾಜಕೀಯ ಪಕ್ಷ ಸ್ಥಾಪಿಸಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಎದುರಿಸಲಿದ್ದಾರಂತೆ. ಈ ವರದಿ ಅನೇಕರಿಗೆ ಅಚ್ಚರಿ ತರಿಸಿದೆ.
ಅರಿಜಿತ್ ಸಿಂಗ್ ರಾಜಕೀಯಕ್ಕೆ ಕಾಲಿಡುವ ಬಗ್ಗೆ ಎನ್ಡಿಟಿವಿ ವರದಿ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಈ ವರ್ಷ ಚುನಾವಣೆ ನಡೆಯಲಿದೆ. ಆದರೆ, ಇದರಲ್ಲಿ ಸ್ಪರ್ಧಿಸುವ ಆಲೋಚನೆ ಅರಿಜಿತ್ ಸಿಂಗ್ ಅವರಿಗೆ ಇಲ್ಲ. ಒಂದು ಪಕ್ಷ ಕಟ್ಟಿ ಬೆಳೆಸಬೇಕು, ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂದರೆ ಅದು ಸಣ್ಣ ವಿಷಯ ಅಲ್ಲ. ಅದಕ್ಕೆ ಸಾಕಷ್ಟು ಸಿದ್ಧತೆ ಬೇಕು. ಈ ಸಿದ್ಧತೆಯನ್ನು ಮಾಡಿಕೊಳ್ಳುವ ಆಲೋಚನೆಯಲ್ಲಿ ಅರಿಜಿತ್ ಸಿಂಗ್ ಇದ್ದಾರೆ.
ಸಾಮಾನ್ಯವಾಗಿ ನಟ-ನಟಿಯರು ರಾಜಕೀಯ ಪಕ್ಷ ಸ್ಥಾಪಿಸಿ ಚುನಾವಣೆಗೆ ಸ್ಪರ್ಧಿಸಿದ ಉದಾಹರಣೆ ಇದೆ. ಅದೇ ರೀತಿ ಕೆಲವು ಗಾಯಕರು ಒಂದು ಪಕ್ಷದ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದಿದೆ. ಆದರೆ, ಗಾಯಕನೋರ್ವ ಪಕ್ಷ ಸ್ಥಾಪಿಸುವ ಆಲೋಚನೆ ಮಾಡಿದ್ದು ಕಡಿಮೆ. ಈಗ ಅಂತಹ ಅಪರೂಪದ ಕೆಲಸಕ್ಕೆ ಅರಿಜಿತ್ ಸಿಂಗ್ ಕೈ ಹಾಕಿದ್ದಾರೆ.
ಅರಿಜಿತ್ ಸಿಂಗ್ ಕೇವಲ ಗಾಯಕ ಮಾತ್ರ ಅಲ್ಲ. ಅವರು ಒಳ್ಳೆಯ ಮನಸ್ಸನ್ನು ಹೊಂದಿದ್ದಾರೆ. ಸಾಮಾಜಿಕ ಕೆಲಸಗಳನ್ನು ಮಾಡುತ್ತಾರೆ. ಅರಿಜಿತ್ ಸಿಂಗ್ ಪಶ್ಚಿಮ ಬಂಗಾಳದ ಮುರ್ಷಿದಾ ಬಾದ್ನವರು. ಅವರು ಹುಟ್ಟೂರಿಗೆ ಏನನ್ನಾದರೂ ಮಾಡಬೇಕು ಎಂದು ಕನಸು ಕಂಡವರು. ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಜನರಿಗಾಗಿ ಅವರು ಇಲ್ಲಿ ರೆಸ್ಟೋರೆಂಟ್ ಆರಂಭಿಸಿದ್ದು, 40 ರೂಪಾಯಿಗೆ ಊಟ ನೀಡುವ ಕೆಲಸ ಮಾಡುತ್ತಿದ್ದಾರೆ. ಈಗ ಅವರು ರಾಜಕೀಯದ ಮೂಲಕ ತಮ್ಮ ಕೆಲಸ ಮುಂದುವರಿಸೋ ಆಲೋಚನೆಯಲ್ಲಿ ಇದ್ದಾರೆ. ಈ ಕಾರಣದಿಂದಲೇ ಅವರು ಸಂಗೀತ ಜಗತ್ತನ್ನು ತೊರೆದಿರಬಹುದು ಎಂದು ಹೇಳಲಾಗುತ್ತಾ ಇದೆ.


























