ಪುತ್ತೂರು: ಕೋಳಿಅಂಕ ಸೇರಿದಂತೆ ಸಾಂಪ್ರದಾಯಿಕ ಆಚರಣೆಗಳನ್ನು ಉಳಿಸುವ ನಿಟ್ಟಿನಲ್ಲಿ ಫೆ. 1ರಂದು ಬೆಳಿಗ್ಗೆ 10ಕ್ಕೆ ಸಾಲ್ಮರ ಕೊಟೇಚಾ ಹಾಲ್’ನಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಬೆಳಿಯಪ್ಪ ಗೌಡ ಹೇಳಿದರು
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳುನಾಡಿನ ಕ್ರೀಡೆಗಳಲ್ಲಿ ಕಂಬಳದಷ್ಟೇ ಮುಂಚೂಣಿಯಲ್ಲಿರುವ ಒಂದು ಕ್ರೀಡೆ ಕೋಳಿ ಅಂಕ. ಇದನ್ನು ಕ್ರೀಡೆ ಅನ್ನುವುದಕ್ಕಿಂತ ನಂಬಿಕೆ ಅಂತ ನಂಬುವವರೇ ಹೆಚ್ಚು. ಆದ್ದರಿಂದ ಜೂಜು ರಹಿತವಾಗಿ ಕೋಳಿ ಅಂಕವನ್ನು ಆಚರಿಸಲು ಸರಕಾರದಿಂದ ಅನುಮತಿ ಪಡೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಸಮಾಲೋಚನಾ ಸಭೆ ಹಮ್ಮಿಕೊಂಡಿದ್ದೇವೆ ಎಂದರು.
ದೈವಾರಾಧನೆ, ಯಕ್ಷಗಾನ, ನಾಗಮಂಡಲ, ನವರಾತ್ರಿಯ ವಿಶೇಷ ಆಚರಣೆಗಳು ಈ ಮಣ್ಣಿನ ವಿಶೇಷತೆ. ಇಲ್ಲಿ ಹಲವಾರು ಪ್ರಾಚೀನ ಕ್ರೀಡೆಗಳಿದ್ದು, ಜಾತ್ರೆ, ನೇಮೋತ್ಸವ, ಕೃಷಿ ಮುಂತಾದ ವಿಚಾರಗಳಿಗೆ ಹೊಂದಿಕೊಂಡಿದೆ. ಇದರಲ್ಲಿ ಕೋಳಿ ಅಂಕ ಪ್ರಾಚೀನ ಕಾಲದಿಂದ ಬಂದಿದ್ದು, ಇಲ್ಲಿಯ ತನಕ ಯಾವುದೇ ತೊಂದರೆಯಾದದ್ದು ಇಲ್ಲ. ತನ್ನದೇ ಆದ ಚೌಕಟ್ಟಿನಲ್ಲಿ ಕೋಳಿ ಅಂಕ ನಡೆದುಕೊಂಡು ಬಂದಿದೆ. ಅಲ್ಲದೇ, ದೈವಾರಾಧನೆಯ ಪ್ರಮುಖ ಅಂಗವೂ ಹೌದು ಎಂದರು.
ಸಮಿತಿಯ ಮನ್ಮಥ ಶೆಟ್ಟಿ ಮಾತನಾಡಿ, ಪ್ರಾಚೀನ ಸಂಪ್ರದಾಯದ ಪ್ರಕಾರ ಕೋಳಿ ಅಂಕವು ದೈವಗಳ ನೇಮೋತ್ಸವದ ಮೊದಲು ನಡೆದರೆ, ಇನ್ನು ಕೆಲವು ಕಡೆ ದೈವ ನರ್ತನದ ಸಂದರ್ಭ ನಡೆಯುತ್ತದೆ. ಮತ್ತೆ ಕೆಲವು ಕಡೆಗಳಲ್ಲಿ ನೇಮೋತ್ಸವ ಮುಗಿದ ನಂತರ ನಡೆಯುತ್ತದೆ. ಹಾಗೆಯೇ ದೈವದ ಗೊನೆ ಮುಹೂರ್ತದ ನಂತರ ಕೋಳಿಗೂಟ ವಾಡಿಕೆಯಲ್ಲಿ ಇರುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕೋಳಿ ಅಂಕಕ್ಕೆ ಜೂಜು ಮಸ್ತಿ ಅನ್ನುವ ಹಣೆಕಟ್ಟಿ ಕಟ್ಟಿ ಸರಕಾರ ಹಾಗೂ ಪೊಲೀಸ್ ಇಲಾಖೆ ನಿರ್ಬಂಧ ಹೇರುವ ಮುಖಾಂತರ ಈ ನಾಡಿನ ಜನತೆಯ ಧಾರ್ಮಿಕ ಭಾವನೆಗೆ ನೋವನ್ನುಂಟು ಮಾಡಿದೆ. ತೆಂಗಿನಕಾಯಿ ಕುಟ್ಟುವುದೂ ಸಾಂಪ್ರದಾಯಿಕ ಕ್ರೀಡೆ. ಇದಕ್ಕೂ ಪೊಲೀಸ್ ಇಲಾಖೆ ಕಡಿವಾಣ ಹಾಕಿದೆ. ಮುಂದಿನ ದಿನಗಳಲ್ಲಿ ಈ ಎಲ್ಲಾ ಆಚರಣೆಗಳನ್ನು ಮುಂದುವರಿಸಲು ಒಗ್ಗಟ್ಟಾಗಿ ಸೇರಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಿವಣ್ಣ ಗೌಡ ಇಡ್ಯಾಡಿ, ವಿವೇಕ್, ಚಂದ್ರಹಾಸ ಕೇಪು, ಶಿವಪ್ರಸಾದ್ ಪಡೀಲ್ ಉಪಸ್ಥಿತರಿದ್ದರು.


























