ಬೆಂಗಳೂರು: ಆಸ್ಟ್ರೇಲಿಯಾ ಮತ್ತು ಗೋವಾ ಸರ್ಕಾರಗಳ ರೀತಿಯಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಬಗ್ಗೆ ಕರ್ನಾಟಕ ಕೂಡ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಶುಕ್ರವಾರ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಮಾಹಿತಿ ನೀಡಿದರು. ಸಾಮಾಜಿಕ ಮಾಧ್ಯಮಗಳ ದುರುಪಯೋಗದ ಬಿಜೆಪಿ ಹಿರಿಯ ನಾಯಕ ಮತ್ತು ಶಾಸಕ ಎಸ್ ಸುರೇಶ್ ಕುಮಾರ್ ಕಳವಳ ವ್ಯಕ್ತಪಡಿಸಿದಾಗ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಇದು ಗಂಭೀರ ವಿಷಯವಾಗಿದೆ ಎಂದು ಸಹಮತ ವ್ಯಕ್ತಪಡಿಸಿದರು. ಅಲ್ಲದೆ, ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧಿಸುವ ಬಗ್ಗೆ ಯೋಚಿಸಲಾಗುವುದು ಎಂದರು.
ಈ ನಿಟ್ಟಿನಲ್ಲಿ ಫಿನ್ಲ್ಯಾಂಡ್ ಈಗಾಗಲೇ ಕ್ರಮ ಕೈಗೊಂಡಿದೆ. ಬ್ರಿಟನ್ ಚಿಂತನೆ ನಡೆಸುತ್ತಿದೆ. ಆಸ್ಟ್ರೇಲಿಯಾ ಎರಡು ತಿಂಗಳ ಹಿಂದೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಿತು. ಕೃತಕ ಬುದ್ಧಿಮತ್ತೆ ಮತ್ತು ಸಾಮಾಜಿಕ ಮಾಧ್ಯಮದ ಜವಾಬ್ದಾರಿಯುತ ಬಳಕೆಗಾಗಿ ‘ಡಿಜಿಟಲ್ ಡಿಟಾಕ್ಸಿಫಿಕೇಷನ್’ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಐಟಿ-ಬಿಟಿ ಇಲಾಖೆಯು ಮೆಟಾ ಸಹಯೋಗದೊಂದಿಗೆ ಮೂರು ಲಕ್ಷಕ್ಕೂ ಹೆಚ್ಚು ಮಕ್ಕಳು ಮತ್ತು ಒಂದು ಲಕ್ಷ ಶಿಕ್ಷಕರನ್ನು ಒಳಗೊಂಡಂತೆ ಈ ಕಾರ್ಯ ನಡೆಸುತ್ತಿದೆ ಎಂದು ಅವರು ಹೇಳಿದರು.
























