ಕಾರವಾರ: : ಮಾಜಿ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ ಸಕ್ರಿಯ ರಾಜಕಾರಣ ಅಖಾಡಕ್ಕೆ ರೀ ಎಂಟ್ರಿ ನೀಡಲಿದ್ದಾರೆ ಎಂಬ ಚರ್ಚೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯ ವಲಯದಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರಗೊಂಡಿತ್ತು. ಅದಕ್ಕೆ ಪೂರಕವೆಂಬಂತೆ ಇದೀಗ ಕೆಲವು ಚಟುವಟಿಕೆಗಳು ನಡೆಯುತ್ತಿರುವುದು ಕುತೂಹಲ ಹೆಚ್ಚಿಸಿದೆ. ಕೆಲವು ವರ್ಷಗಳಿಂದ ಸಕ್ರಿಯ ರಾಜಕೀಯ ಹಾಗೂ ಬಿಜೆಪಿಯ ಸಂಘಟನಾ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದ ಹೆಗಡೆ, ಇದೀಗ ಎರಡನೇ ಇನಿಂಗ್ಸ್ ಆರಂಭಿಸಲು ಸಜ್ಜಾಗಿರುವ ಸೂಚನೆಗಳು ಸ್ಪಷ್ಟವಾಗಿವೆ.
ಮಾರ್ಚ್ 8ರಂದು ಭಟ್ಕಳದಲ್ಲಿ ನಡೆಯಲಿರುವ ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಅನಂತ್ ಕುಮಾರ್ ಹೆಗಡೆ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ತಮ್ಮ ಹಳೆಯ ರಣಕಣವೆಂದೇ ಗುರುತಿಸಿಕೊಂಡಿರುವ ಭಟ್ಕಳದಿಂದಲೇ ಅವರು ಸಂಘಟನಾ ಚಟುವಟಿಕೆಗೆ ಮರಳುತ್ತಿರುವುದು ಗಮನಾರ್ಹವಾಗಿದೆ.
ಹಿಂದೂ ಸಂಗಮ ಆಯೋಜಕರು ಮತ್ತು ಸಂಘ ಪರಿವಾರದ ನಾಯಕರು ಹೆಗಡೆಯವರನ್ನು ಮತ್ತೆ ಅಖಾಡಕ್ಕೆ ಕರೆತರುವ ಬಗ್ಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು ಎಂಬುದು ಮೂಲಗಳಿಂದ ತಿಳಿದುಬಂದಿದೆ. ಸಂಘ ಪರಿವಾರದ ಹಿರಿಯ ನಾಯಕರ ಮನವೊಲಿಕೆಯ ನಂತರವೇ ಹೆಗಡೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅನಂತ್ ಕುಮಾರ್ ಹೆಗಡೆ ಆಗಮನದ ಹಿನ್ನಲೆಯಲ್ಲಿ ಭಟ್ಕಳದಲ್ಲಿ ಭರ್ಜರಿ ಸ್ವಾಗತದ ಸಿದ್ಧತೆಗಳು ಜೋರಾಗಿವೆ. ನಗರ ಪ್ರವೇಶಕ್ಕೂ ಮುನ್ನ ಭವ್ಯ ರೋಡ್ ಶೋ ನಡೆಸಲು ಯೋಜನೆ ರೂಪಿಸಲಾಗಿದೆ. ಭಟ್ಕಳ ಹೊರ ಭಾಗದಿಂದ ಕಾರ್ಯಕ್ರಮದ ವೇದಿಕೆಯವರೆಗೆ ನೂರಕ್ಕೂ ಹೆಚ್ಚು ಕಾರುಗಳ ರ್ಯಾಲಿ ಮೂಲಕ ಹೆಗಡೆಯವರಿಗೆ ಸ್ವಾಗತ ಕೋರುವ ಯೋಜನೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ರಾಜಕೀಯದಲ್ಲಿ ತನ್ನದೇ ಆದ ಪ್ರಭಾವವನ್ನು ಮೂಡಿಸಿರುವ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಮತ್ತೆ ಸಾರ್ವಜನಿಕ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ ಅವರು ಹಲವು ಅವಧಿಗಳಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ಸಂಸತ್ತಿನಲ್ಲಿ ಸಕ್ರಿಯ ಪಾತ್ರವಹಿಸಿದ್ದರು.
1968ರ ಮಾರ್ಚ್ 20ರಂದು ಜನಿಸಿದ ಹೆಗಡೆ ಅವರು ಯುವ ವಯಸ್ಸಿನಿಂದಲೇ ರಾಜಕೀಯ ಪ್ರವೇಶ ಮಾಡಿ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಉತ್ತರ ಕನ್ನಡ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ಕೇಂದ್ರ ರಾಜಕೀಯದಲ್ಲಿ ಗುರುತಿಸಿಕೊಂಡರು. ಕೇಂದ್ರ ಸರ್ಕಾರದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ ಅವರು, ಕೌಶಲ್ಯ ತರಬೇತಿ ಮತ್ತು ಉದ್ಯೋಗಾವಕಾಶಗಳ ವಿಸ್ತರಣೆಗೆ ಒತ್ತು ನೀಡಿದ್ದರು.
ತಮ್ಮ ಸ್ಪಷ್ಟ ಹಾಗೂ ನೇರ ಹೇಳಿಕೆಗಳ ಮೂಲಕ ಹೆಗಡೆ ಅವರು ಹಲವು ಬಾರಿ ಸುದ್ದಿಯಲ್ಲಿದ್ದರು. ಬೆಂಬಲಿಗರು ಅವರನ್ನು ಧೈರ್ಯಶಾಲಿ ನಾಯಕ ಎಂದು ಕೊಂಡಾಡಿದರೆ, ವಿರೋಧಿಗಳು ಅವರ ಹೇಳಿಕೆಗಳನ್ನು ವಿವಾದಾತ್ಮಕವೆಂದು ಟೀಕಿಸಿದ್ದಾರೆ. ಆದಾಗ್ಯೂ, ಉತ್ತರ ಕನ್ನಡದಲ್ಲಿ ತಮ್ಮದೇ ಆದ ಮತಬ್ಯಾಂಕ್ ಹೊಂದಿರುವ ಅವರು ಜಿಲ್ಲೆಯ ರಾಜಕೀಯ ಸಮೀಕರಣಗಳಲ್ಲಿ ಮಹತ್ವದ ವ್ಯಕ್ತಿಯಾಗಿದ್ದಾರೆ.
ಪ್ರಸ್ತುತ ರಾಜಕೀಯ ಬೆಳವಣಿಗೆಗಳ ನಡುವೆಯೂ ಅನಂತ್ ಕುಮಾರ್ ಹೆಗಡೆ ಅವರ ಮುಂದಿನ ರಾಜಕೀಯ ಹೆಜ್ಜೆಗಳ ಬಗ್ಗೆ ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಮುಂದುವರಿದಿದೆ.
ಅನಂತ್ ಕುಮಾರ್ ಹೆಗಡೆ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವ ಸಾಧ್ಯತೆ ಇದೆ ಎಂಬ ಬಗ್ಗೆ ಕೆಲವು ದಿನಗಳಿಂದೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲೂ ವ್ಯಾಪಕ ಚರ್ಚೆಯಾಗಿತ್ತು. ಊಹಾಪೋಹಗಳೂ ಹರಿದಾಡಿದ್ದವು. ಆದರೆ, ಅಧಿಕೃತ ಮಾಹಿತಿ ಈವರೆಗೆ ಬಂದಿರಲಿಲ್ಲ. ಆದರೆ ಇದೀಗ, ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಹೆಗಡೆ ಭಾಗವಹಿಸಲು ಸಿದ್ಧರಾಗಿರುವುದು ಅವರ ರಿ ಎಂಟ್ರಿ ವದಂತಿಗಳಿಗೆ ಪುಷ್ಟಿ ನೀಡಿದೆ.



























