ಹಾಸನ: ಬೆಂಗಳೂರಿನಿಂದ ಸುಮಾರು 190 ಕಿ.ಮೀ. ದೂರದಲ್ಲಿರುವ ಹಾಸನಕ್ಕೆ ವಿಮಾನ ನಿಲ್ದಾಣ ನಿರ್ಮಿಸುವ ಉದ್ದೇಶದಿಂದ 1966ರಲ್ಲೇ ಭೂಸ್ವಾಧೀನ ಪ್ರಕ್ರಿಯೆ ಆರಂಭವಾದರೂ, ಯೋಜನೆಯ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಇದರಿಂದ ದಶಕಗಳ ಕನಸು ಇನ್ನೂ ನನಸಾಗುವ ಹಂತಕ್ಕೆ ತಲುಪಿಲ್ಲ.
ಬಹುಕಾಲದ ಕನಸಾದ ವಿಮಾನ ನಿಲ್ದಾಣ ಯೋಜನೆ ಇನ್ನೂ ನೆನೆಗುದಿಗೆ ಬಿದ್ದಿದ್ದು, ಸ್ಥಳೀಯರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಅಭಿವೃದ್ಧಿಗೆ ದಿಕ್ಕು ತೋರಬೇಕಿದ್ದ ಯೋಜನೆ ಹಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದ ವಿಳಂಬವಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹಾಸನ ಸಮೀಪ ಭುವನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆ ಸಂಪನ್ಮೂಲ ಹಾಗೂ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದುರಾಗಿದ್ದು, ಇದರಿಂದ ಯೋಜನೆ ವಿಳಂಬವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮೂಲಗಳ ಪ್ರಕಾರ, ಭೂಸ್ವಾಧೀನ ಪ್ರಕ್ರಿಯೆಯ ಜಟಿಲತೆ, ಪರಿಸರ ಅನುಮತಿಗಳ ವಿಳಂಬ ಹಾಗೂ ಹಣಕಾಸು ಹಂಚಿಕೆ ವಿಚಾರಗಳಲ್ಲಿ ಸ್ಪಷ್ಟತೆ ಕೊರತೆಯೇ ಪ್ರಮುಖ ಅಡ್ಡಿಗಳಾಗಿವೆ. ಯೋಜನೆಗೆ ಅಗತ್ಯವಾದ ಭೂಮಿ ಗುರುತಿಸುವ ಕಾರ್ಯ ಪೂರ್ಣಗೊಳ್ಳದಿರುವುದೂ ವಿಳಂಬಕ್ಕೆ ಕಾರಣವೆಂದು ಹೇಳಲಾಗಿದೆ.
516 ಏಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಗೆ 2006ರಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.
ಪ್ರಾರಂಭದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಎವಿಯೇಷನ್ ತರಬೇತಿ ಕೇಂದ್ರ, ಎಂಆರ್‌ಒ ಸೌಲಭ್ಯ, ಕಾರ್ಗೋ ಟರ್ಮಿನಲ್, ಕೋಲ್ಡ್ ಸ್ಟೋರೇಜ್ ಸೇರಿದಂತೆ ಬಹುಮುಖ ಯೋಜನೆಗಳನ್ನು ರೂಪಿಸಲಾಗಿತ್ತು. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ರಾಜ್ಯ ಸರ್ಕಾರ ಅದನ್ನು ಸರಳ (ನೋ-ಫ್ರಿಲ್) ವಿಮಾನ ನಿಲ್ದಾಣವಾಗಿ ನಿರ್ಮಿಸಲು ನಿರ್ಧರಿಸಿತು.
ನಂತರ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಉಡಾನ್ ಯೋಜನೆಯಡಿ ಕಾಮಗಾರಿ ಕಾರ್ಯವನ್ನು ಮುಂದುವರಿಸಲಾಯಿತು.
ಹಾಸನ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಪ್ರಸ್ತಾವನೆ ಮತ್ತೆ ಚರ್ಚೆಗೆ ಬಂದಿದೆ. ಮಲೆನಾಡು ಪ್ರದೇಶದ ಆರ್ಥಿಕ, ಕೈಗಾರಿಕಾ ಹಾಗೂ ಪ್ರವಾಸೋದ್ಯಮ ವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಈ ಯೋಜನೆ ರೂಪುಗೊಂಡಿದೆ ಎಂದು ತಿಳಿದುಬಂದಿದೆ.
ಜಿಲ್ಲೆಯ ಕೃಷಿ ಮತ್ತು ಹಾಲು ಉತ್ಪಾದನಾ ಕ್ಷೇತ್ರಗಳಿಗೆ ವೇಗ ನೀಡಲು ವಿಮಾನ ನಿಲ್ದಾಣ ಮಹತ್ವದ ಹೆಜ್ಜೆಯಾಗಲಿದೆ. ಕಾಫಿ, ಮಸಾಲೆ ಹಾಗೂ ಇತರೆ ಕೃಷಿ ಉತ್ಪನ್ನಗಳ ವೇಗವಾದ ಸಾಗಣೆ ಮತ್ತು ರಫ್ತು ಅವಕಾಶಗಳು ಹೆಚ್ಚುವ ನಿರೀಕ್ಷೆ ಇದೆ.
ಪ್ರವಾಸೋದ್ಯಮ ಕ್ಷೇತ್ರಕ್ಕೂ ಯೋಜನೆ ಪೂರಕವಾಗಲಿದೆ. ಹಾಸನ ಜಿಲ್ಲೆಯ ಪ್ರಸಿದ್ಧ ಐತಿಹಾಸಿಕ ಹಾಗೂ ಧಾರ್ಮಿಕ ತಾಣಗಳಾದ ಬೇಳೂರು ಹಳೇಬೀಡು ಹಾಗೂ ಶ್ರವಣಬೆಳಗೊಳ ಗಳಿಗೆ ದೇಶ–ವಿದೇಶಗಳಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ನೇರ ವಿಮಾನ ಸಂಪರ್ಕ ಸಹಾಯಕವಾಗಲಿದೆ ಎಂದು ಪ್ರವಾಸೋದ್ಯಮ ವಲಯ ಅಭಿಪ್ರಾಯಪಟ್ಟಿದೆ.
ಇದೇ ವೇಳೆ, ವಿಮಾನ ನಿಲ್ದಾಣ ನಿರ್ಮಾಣದಿಂದ ನೇರ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಸ್ಥಳೀಯ ಯುವಕರಿಗೆ ಉದ್ಯೋಗದ ದಾರಿ ತೆರೆದಿಡಲಿದೆ. ಹೂಡಿಕೆದಾರರನ್ನು ಆಕರ್ಷಿಸಲು ಹಾಗೂ ಕೈಗಾರಿಕಾ ವಲಯವನ್ನು ಬಲಪಡಿಸಲು ಸಹ ಯೋಜನೆ ನೆರವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ, ಹಾಸನದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಪ್ರಸ್ತಾವನೆ ಜಿಲ್ಲೆಗೆ ಆರ್ಥಿಕ ಚೇತನ ನೀಡುವ ಪ್ರಮುಖ ಯೋಜನೆಯಾಗಿ ಪರಿಣಮಿಸುವ ನಿರೀಕ್ಷೆ ವ್ಯಕ್ತವಾಗಿದೆ.
ಯೋಜನೆ ಭೂ ಪ್ರದೇಶದಲ್ಲಿ ಟರ್ಮಿನಲ್ ಕಟ್ಟಡ, ಏರ್ ಟ್ರಾಫಿಕ್ ಕಂಟ್ರೋಲ್ (ATC) ಗೋಪುರ, ರನ್‌ವೇ ಹಾಗೂ ಏಪ್ರಾನ್ ಸೇರಿದಂತೆ ಶೇಕಡಾ 80ಕ್ಕೂ ಹೆಚ್ಚು ಕಾಮಗಾರಿ ಪೂರ್ಣಗೊಂಡಿದೆ. ಆದರೆ, ವಿಮಾನ ನಿಲ್ದಾಣದ ಮೇಲ್ಮೈಯಲ್ಲಿ ಹೈಟೆನ್ಷನ್ ವಿದ್ಯುತ್ ತಂತಿಗಳು ಹಾದುಹೋಗಿರುವುದು ಹಾಗೂ ಟವರ್ ಸ್ಥಳಾಂತರಕ್ಕೆ ರೈತರಿಂದ ಹೆಚ್ಚಿನ ಪರಿಹಾರ ಬೇಡಿಕೆ ಬಂದಿದ್ದರಿಂದ ಕಾಮಗಾರಿ ತಡವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಇದಲ್ಲದೆ, ಯೋಜನೆಗೆ ಸಕಾಲದಲ್ಲಿ ಹಣವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ವಿಫಲವಾಗಿರುವುದು ಮತ್ತೊಂದು ಕಳವಳಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಸಂಪರ್ಕ ರಸ್ತೆಗಳ ನಿರ್ಮಾಣಕ್ಕಾಗಿ ಹೊಸ ಭೂಸ್ವಾಧೀನಕ್ಕೆ ರೂ.143.67 ಕೋಟಿ ಬಿಡುಗಡೆ ಮಾಡುವಂತೆ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (KSIIDC) ಮನವಿ ಮಾಡಿದ್ದು, ವಿಮಾನ ನಿಲ್ದಾಣ ಪೂರ್ಣಗೊಳಿಸಲು ಇನ್ನೂ ಸುಮಾರು ರೂ.200 ಕೋಟಿ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ ವಿಮಾನ ನಿಲ್ದಾಣ ಪೂರ್ಣಗೊಂಡರೆ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
ಭುವನಹಳ್ಳಿಯ ಇಬ್ಬರು ರೈತರಾದ ಕೃಷ್ಣೇಗೌಡ ಮತ್ತು ಬೊಮ್ಮೇಗೌಡ ಅವರು ಮಾತನಾಡಿ, ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಹಾಗೂ ಯೋಜನೆಗಾಗಿ ಭೂಮಿ ಹಸ್ತಾಂತರಿಸಿದ ಸ್ಥಳೀಯರಿಗೆ ಅಧಿಕಾರಿಗಳು ಉದ್ಯೋಗಾವಕಾಶ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.


























