ಗಂಗಾವತಿ: ಪುತ್ತೂರಿನ ಈಶ್ವರಮಂಗಳದ ಹನುಮಗಿರಿಯಲ್ಲಿ ಏಪ್ರಿಲ್ 9 ರಿಂದ 12 ರವರೆಗೆ ನಡೆಯಲಿರುವ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬಜರಂಗದಳವು ಅಯೋಧ್ಯೆಯ ಶ್ರೀ ರಾಮ ಮಂದಿರದಿಂದ “ರಾಮ ಜ್ಯೋತಿ ಯಾತ್ರೆ” ಆಯೋಜಿಸಿದೆ.
ಈ ಯಾತ್ರೆಯು ಮಾರ್ಚ್ 30ಕ್ಕೆ ಗಂಗಾವತಿ ನಗರಕ್ಕೆ ಆಗಮಿಸುತ್ತಿದ್ದು, ಮಾರ್ಚ್ 31 ರಂದು ಅಂಜನಾದ್ರಿಯಿಂದ ಹನುಮ ಜ್ಯೋತಿಯನ್ನು ಕೊಂಡೊಯ್ಯಲಿದೆ. ಈ ನಿಮಿತ್ತ ಕೈಗೊಳ್ಳಬೇಕಾದ ರೂಪರೇಷೆಗಳ ಬಗ್ಗೆ ನಿನ್ನೆ ಪೂರ್ವಭಾವಿ ಸಭೆಯನ್ನು ಗಂಗಾವತಿಯ ಶೃಂಗೇರಿ ಶಾರದ ಮಠದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಗಾಳಿ ಜನಾರ್ಧನ ರೆಡ್ಡಿ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಮಾಜಿ ಸಂಸದರಾದ ಶಿವರಾಮೇಗೌಡ, ಮಾಜಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ, ನಗರ ಮಂಡಲ ಅಧ್ಯಕ್ಷರಾದ ಚಂದ್ರಶೇಖರ ಹಿರೂರು, ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕರಾದ ಮುರಳಿಕೃಷ್ಣ ಹಸಂತಡ್ಕ, ಮುಖಂಡರಾದ ಮನೋಹರಗೌಡ ಹೇರೂರು, ಯಮನೂರು ಚೌಡ್ಕಿ, ವೀರೇಶ್ ಬಲಕುಂದಿ, ಸಿದ್ದರಾಮಯ್ಯಸ್ವಾಮಿ, ಗಿರಿಗೌಡ, ಚಂದ್ರು ಅಲಗೇರಿ, ನೀಲಕಂಠಪ್ಪ, ಅಯ್ಯನಗೌಡ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.



























