ಉಪ್ಪಿನಂಗಡಿ: ಸನಾತನ ಹಿಂದೂ ಧರ್ಮವೆನ್ನುವುದು ಅಶ್ವತ್ಥ ಮರದ ಹಾಗೆ ಊರ್ಧ್ವ ಬೇರನ್ನು ಹೊಂದಿದೆ. ಆದ್ದರಿಂದ ಅದಕ್ಕೆ ಅಳಿವಿಲ್ಲ. ಆದರೆ ಅದಕ್ಕೆ ಶಕ್ತಿ ತುಂಬುವ ಕೆಲಸವನ್ನು ನಾವು ಮಾಡಬೇಕು. ಅದನ್ನು ಇನ್ನಷ್ಟು ಬೆಳೆಸಬೇಕು ಎಂದು ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ತಿಳಿಸಿದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಹಾಗೂ ನಾಗಮಂಡಲೋತ್ಸವ ಸಮಿತಿ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ಆಯೋಜಿಸಲಾದ ಚತುಃಪವಿತ್ರ ನಾಗಮಂಡಲ ಸೇವೆಯ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವರ್ಚನ ನೀಡಿದರು.
ಕಣ್ಣಿಗೆ ಕಾಣುವ ದೇವರೆಂದರೆ ನಾಗ ದೇವರು. ನಾಗನ ಆರಾಧನೆಯೆನ್ನುವುದು ನಮ್ಮ ಮೂಲ ನಂಬಿಕೆಯಾಗಿದೆ. ಹಿಂದೂ ಧರ್ಮದಲ್ಲಿ ಬ್ರಾಹ್ಮಣ್ಯ, ಕ್ಷತ್ರೀಯ, ವೈಶ್ಯ, ಶೂದ್ರವೆಂಬ ವಿಂಗಡನೆಯಿದ್ದರೂ ಪರಸ್ಪರ ಸಮನ್ವಯ ಇದ್ದಾಗ ಮಾತ್ರ ಸಮಾಜದ ಉಳಿವು ಸಾಧ್ಯ. ಪ್ರೀತಿ ತುಂಬಿದ ಒಡಲು, ಪರೋಪಕಾರದ ಬದುಕು, ಎಲ್ಲವನ್ನೂ ಕೇಳುವ ಕಿವಿ ನಮ್ಮದಾಗಿರಬೇಕು. ಈ ಗುಣ ಪುತ್ತಿಲ ಪರಿವಾರದಲ್ಲಿ ಕಂಡು ಬರುತ್ತದೆ. ಸನಾತನ ಹಿಂದೂ ಧರ್ಮಕ್ಕೆ ಶಕ್ತಿ ತುಂಬಬೇಕಾದರೆ ಏನು ಮಾಡಬಹುದು ಎನ್ನುವುದನ್ನು ಪುತ್ತಿಲ ಪರಿವಾರದವರನ್ನು ನೋಡಿ ಕಲಿಯಬೇಕು. ಸಮಾಜಮುಖಿ ಕೆಲಸ ಮಾಡುವ ಸಂಸ್ಥೆಗಳು ಮಾತ್ರ ಬಾಳಿಕೆ ಬರಲು ಸಾಧ್ಯ. ಸಮಾಜಮುಖಿ ಕೆಲಸಗಳೊಂದಿಗೆ ಧಾರ್ಮಿಕ ಕಾರ್ಯಗಳನ್ನು ನಿರಂತರವಾಗಿ ಮಾಡುವ ಪುತ್ತಿಲ ಪರಿವಾರದಂತಹ ಸಂಸ್ಥೆಗಳು ಸಮಾಜದಲ್ಲಿ ಶಾಶ್ವತವಾಗಿ ಇರಲಿವೆ ಎಂದರು.
ಶ್ರೀ ಕ್ಷೇತ್ರ ಕೇಮಾರಿನ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ನಮ್ಮ ಸಮಾಜವಿಂದು ವಿರುದ್ಧ ದಿಕ್ಕಿನತ್ತ ಸಾಗುತ್ತಿದ್ದು, ತಂದೆ- ತಾಯಿಗಳು ವೃದ್ಧಾಶ್ರಮದಲ್ಲಿ ನೆಲೆಸುವಂತಹ ಪರಿಸ್ಥಿತಿ ತಲೆದೋರಿದೆ. ಮೊದಲು ಒಳ್ಳೆಯದಾಗು ಆ ಬಳಿಕ ಸಂಪಾದನೆ ಮಾಡು ಎಂದಿದ್ದ ಕಾಲವೀಗ ಸಂಪಾದನೆಯ ಮೂಲಕ ಸಮಾಜದಲ್ಲಿ ಒಳ್ಳೆಯವನಾಗಿ ಗುರುತಿಸಿಕೋ ಎನ್ನುವಷ್ಟು ಬದಲಾಗಿದೆ. ಶೈಕ್ಷಣಿಕವಾಗಿ ಉತ್ತಮ ಅಂಕವನ್ನು ಪಡೆದರಷ್ಟೇ ಸಾಲದು. ಸಂಸ್ಕಾರಯುತವಾದ ಬದುಕನ್ನು ನಾವು ರೂಡಿಸಿಕೊಳ್ಳಬೇಕು. ಆದ್ದರಿಂದ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ನಾವು ಮೊದಲು ಮಾಡಬೇಕು. ಪುತ್ತಿಲ ಅವರಿಗೆ ಶನಿ ಪೂಜೆ ಮಾಡಿಸುವ ಸಂದರ್ಭದಿಂದಲೇ ಅನ್ಯಾಯವಾಗುತ್ತಾ ಬರುತ್ತಿದೆ. ಆದರೆ ಅವರು ಮಾತ್ರ ಫುಟ್‌ಬಾಲ್ ಚೆಂಡಿನಂತೆ ಮೇಲೆದ್ದು ಬರುತ್ತಿದ್ದಾರೆ. ಇದಕ್ಕೆ ಕಾರಣ ಅವರು ಮಾಡುತ್ತಿರುವ ಉತ್ತಮ ಕಾರ್ಯಗಳು. ಚತುಃಪವಿತ್ರ ನಾಗಮಂಡಲವನ್ನು ಆಯೋಜಿಸಿದ್ದರಿಂದ ಇಲ್ಲಿಂದು ಹಿಂದೂಗಳ ಸಂಗಮವೇ ಆಗಿದೆ ಎಂದರು.
ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ರಾಘವೇಂದ್ರ ಭಟ್ ಮಾತನಾಡಿ, ತಾಯಿ ಭಾಷೆ, ತಾಯಿ ನೆಲದ ಬಗ್ಗೆ ತಿರಸ್ಕಾರ ಭಾವನೆ ತೋರಿದರೆ ಅಂತವರಿಗೆ ಉಳಿವಿಲ್ಲ. ಮಾತೃ ಭಾಷೆ ಮರೆತು ಕೇವಲ ಆಂಗ್ಲ ಭಾಷೆಗೆ ಜೋತು ಬೀಳಬೇಡಿ. ಹೆತ್ತವರನ್ನು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಿ. ಆಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರಲ್ಲದೆ, ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ನಿರಂತರವಾಗಿ ಹಲವು ಸಮಾಜಮುಖಿ ಕೆಲಸಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.
ಸೂರ್ಯ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ರಾಜೇಶ್ ಎಸ್. ಭಟ್ ಮಾತನಾಡಿ, ಔಷಧದ ಜೊತೆಗೆ ದೇವರ ಆಶೀರ್ವಾದವಿದ್ದರೆ ಮಾತ್ರ ರೋಗಿಯ ಬದುಕು ಸುಧಾರಿಸಲು ಸಾಧ್ಯ. ನಾಗಾರಾಧನೆಯು ನಮ್ಮ ಸಂಪ್ರದಾಯವಾಗಿದ್ದು, ಇದು ಕೇವಲ ಆಚರಣೆಯಲ್ಲ. ನಮ್ಮ ನಂಬಿಕೆ, ಭಕ್ತಿಯ ಸಂಕೇತ. ಎಲ್ಲರಿಗೂ ನಾಗದೇವರ ಕೃಪೆ ಇರಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ನಾಗಮಂಡಲೋತ್ಸವ ಸಮಿತಿಯ ಅಧ್ಯಕ್ಷ ಚಂದಪ್ಪ ಮೂಲ್ಯ ಮಾತನಾಡಿ, ಇಲ್ಲಿ ನಾಗಮಂಡಲ ಆಯೋಜನೆ ಮಾಡಿದಾಗ ರಾಜಕೀಯವಾಗಿ ಹಲವು ತೊಂದರೆಗಳನ್ನು ಎದುರಿಸಬೇಕಾಯಿತು. ರಾಜಕಾರಣವನ್ನು ಮುಂದಿಟ್ಟುಕೊಂಡು ಧಾರ್ಮಿಕ ಕಾರ್ಯಗಳಿಗೆ ತಡೆಯಾಗಬಾರದು. ಧರ್ಮ ರಕ್ಷಣೆ ಮಾಡಿ ನಾನೋರ್ವ ನಿಜವಾದ ಹಿಂದೂ ಎಂಬುದನ್ನು ತೋರಿಸಿಕೊಡಬೇಕು. ಉಪ್ಪಿನಂಗಡಿಯಲ್ಲಿಯೂ ಟ್ರಸ್ಟ್ ವತಿಯಿಂದ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಸಮಾಜಮುಖಿ ಕೆಲಸಗಳನ್ನು ನಡೆಸಲಾಗಿದೆ. ಹಲವು ತೊಂದರೆಗಳಾದರೂ ಎಲ್ಲರ ಸಹಕಾರದಿಂದ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ ಎಂದರು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಪ್ರಾಸ್ತಾವಿಕವಾಗಿ ಮಾತನಾಡಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಆರಂಭವಾಗಿ ಎರಡೂವರೆ ವರ್ಷದಲ್ಲಿ ಟ್ರಸ್ಟ್ ವತಿಯಿಂದ ಹಲವು ಸಮಾಜ ಸೇವೆಗಳನ್ನು ಮಾಡಲಾಗಿದೆ. ಟ್ರಸ್ಟ್ ವತಿಯಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರೋಗ್ಯ, ಹಿಂದುತ್ವವೆಂಬ ಐದು ಆಯಾಮಗಳಲ್ಲಿ ಸಮಾಜ ಸೇವೆಗಳನ್ನು ನಡೆಸಲಾಗುತ್ತಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವಾಗಬೇಕೆಂಬುದು ನಮ್ಮ ಉದ್ದೇಶ. ಟ್ರಸ್ಟ್‌ನಿಂದ ಈಗಾಗಲೇ 69 ಲಕ್ಷ ರೂ.ಗಳನ್ನು ಸಮಾಜಕ್ಕೆ ವಿನಿಯೋಗಿಸಲಾಗಿದೆ. 1600 ರೋಗಿಗಳನ್ನು ಉಚಿತವಾಗಿ ಆಂಬುಲೆನ್ಸ್‌ಗಳಲ್ಲಿ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಕೆಲವರ ಬಿಲ್‌ಗಳನ್ನು ಪಾವತಿಸಲಾಗಿದೆ. 21 ಮನೆಗಳ ಮೇಲ್ಚಾವಣಿಯನ್ನು ನಿರ್ಮಿಸಿಕೊಡಲಾಗಿದೆ. 6 ಹೊಸ ಮನೆಯನ್ನು ನಿರ್ಮಿಸಿ ಸೂರಿಲ್ಲದವರಿಗೆ ನೀಡಲಾಗಿದೆ. ಲೋಕಕಲ್ಯಾಣಾರ್ಥಕವಾಗಿ, ಧರ್ಮಾಧರಿತ ಬದುಕು ಹಿಂದೂ ಸಮಾಜದ್ದಾಗಬೇಕು, ಹಿಂದೂ ಸಮಾಜವನ್ನು ಒಗ್ಗೂಡಿಸಬೇಕು ಎಂಬ ಚಿಂತನೆಯಡಿಯಲ್ಲಿ ಉಪ್ಪಿನಂಗಡಿಯಲ್ಲಿ ಚತುಃಪವಿತ್ರ ನಾಗಮಂಡಲವನ್ನು ಆಯೋಜಿಸಲಾಗಿದೆ. ಆದರೆ ಇಲಾಖೆಗಳಿಂದ ಒತ್ತಡ ತಂದು ಈ ಕಾರ್ಯಕ್ರಮವನ್ನು ತಡೆಯುವ ಕೆಲಸವಾಯಿತು. ಹಣ ದುರುಪಯೋಗ ಮಾಡಲಾಗುತ್ತಿದೆ ಎಂದು ಟ್ರಸ್ಟ್ ವಿರುದ್ಧ ಅವಹೇಳನ, ಅಪಪ್ರಚಾರ ಮಾಡುವ ಕೆಲಸಗಳಾಯಿತು. ಆದರೆ ಹಿಂದೂ ಸಮಾಜ ನಮಗೆ ಶಕ್ತಿ ನೀಡಿದ್ದರಿಂದ ಈ ಕಾರ್ಯಕ್ರಮ ನಡೆಸಲು ಸಾಧ್ಯವಾಯಿತು. ಟ್ರಸ್ಟ್ ಹಣ ದುರುಪಯೋಗ ಮಾಡಿಲ್ಲವೆಂದು ನಾನು ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವರ ನಡೆಯಲ್ಲಿ ನಿಂತು ಪ್ರಾರ್ಥನೆ ಮಾಡುತ್ತೇನೆ. ಅಪಪ್ರಚಾರ, ಆರೋಪ ಮಾಡಿದವರು ಬಂದು ದೇವರ ಈ ನಡೆಯಲ್ಲಿ ಅದನ್ನು ಪ್ರಮಾಣೀಕರಿಸಲಿ ಎಂದರು.
ಕಾರ್ಯಕ್ರಮದಲ್ಲಿ ಆಂಬುಲೆನ್ಸ್ ದಾನವಾಗಿ ನೀಡಿದ ಉದ್ಯಮಿ ಗಣಪತಿ ನಾಯಕ್ ಹಾಗೂ ಭೀಮ ಗೋಲ್ಡ್ ಸಂಸ್ಥೆಯ ಪರವಾಗಿ ಅದರ ವ್ಯವಸ್ಥಾಪಕ ರಾಘವೇಂದ್ರ ಭಟ್ ಅವರನ್ನು ಹಾಗೂ ಕ್ರೀಡಾ ಪ್ರತಿಭೆ ಅನಘಾ, ಪಾಕಶಾಸ್ತ್ರಜ್ಞ ರವಿ ಕುಂಟಿನಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಭಜನಾ ಪರಿಷತ್‌ನ ಧನ್ಯಕುಮಾರ್ ರೈ, ಉದ್ಯಮಿ ಗಣಪತಿ ನಾಯಕ್ ನಾಗಮಂಡಲೋತ್ಸವ ಸಮಿತಿಯ ಗೌರವಾಧ್ಯಕ್ಷ ಪ್ರತಾಪ್ ಪೆರಿಯಡ್ಕ, ಕಾರ್ಯಾಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಕಲ್ಯಾಟೆ, ಕೋಶಾಧಿಕಾರಿ ಯತೀಶ್ ಶೆಟ್ಟಿ ಸುವ್ಯ, ಸಹ ಸಂಚಾಲಕ ಉಮೇಶ್ ಕೋಡಿಬೈಲು, ಸಹ ಸಂಚಾಲಕ ಅನಿತ್ ತೆಂಕಿಲ ಉಪಸ್ಥಿತರಿದ್ದರು. ಸ್ವಾಮೀಜಿಯವರನ್ನು ಚಂದಪ್ಪ ಮೂಲ್ಯ ದಂಪತಿ ಹಾಗೂ ಶ್ರೀರಾಮ ಪಾತಾಳ ದಂಪತಿ ಹಣ್ಣು ಹಂಪಲು ನೀಡಿ ಗೌರವಿಸಿದರು. ಅತಿಥಿಗಳಿಗೆ ಸಮಿತಿಯ ಧರ್ನಪ್ಪ ನಾಯ್ಕ, ಜಗದೀಶ್ ಕಂಪ, ರವೀಂದ್ರ ರೈ, ಜನಾರ್ದನ ಕುಲಾಲ್, ಮೋಹನ್ ವರೆಕ್ಕಾ, ಸತೀಶ್ ರಾವ್ ನಂದಿನಿನಗರ, ಲಕ್ಷ್ಮಣ ಗೌಡ ನೆಡ್ಚಿಲ್, ಸುರೇಶ್ ನಲಿಕೆಮಜಲು, ಮಹೇಂದ್ರವರ್ಮ ಪಡ್ಪು, ರಾಮಚಂದ್ರ ಗೌಡ ನೆಡ್ಚಿಲ್, ರಮೇಶ್ ಬಂಡಾರಿ, ಗೋವರ್ಧನ ಗೌಡ, ಗಿರೀಶ್ ಹೆಗ್ಡೆ, ಸಾತ್ವಿಕ್, ಕೇಶವ ನಾಯ್ಕ, ಹರೀಶ್ ಬಂಡಾರಿ, ಲೊಕೇಶ್ ರಂಗಾಜೆ ಶಾಲು ಹೊದಿಸಿ ಗೌರವಿಸಿದರು.
ಕು. ಶಾರ್ವರಿ ಪ್ರಾರ್ಥಿಸಿದರು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ನೆಕ್ಕಿಲಾಡಿ ವಂದಿಸಿದರು. ರವಿಕುಮಾರ್ ರೈ ಕೆದಂಬಾಡಿಮಠ ಕಾರ್ಯಕ್ರಮ ನಿರೂಪಿಸಿದರು.
ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಹಾಗೂ ಉಪ್ಪಿನಂಗಡಿಯ ಉದ್ಯಮಿ ಗಣಪತಿ ನಾಯಕ್ ಅವರು ಟ್ರಸ್ಟ್‌ಗೆ ದಾನವಾಗಿ ನೀಡಿದ ಎರಡು ಆಂಬುಲೆನ್ಸ್‌ಗಳನ್ನು ಈ ಸಂದರ್ಭ ಸಮಾಜಕ್ಕೆ ಲೋಕಾರ್ಪಣೆಗೊಳಿಸಲಾಯಿತು. ಇದರಲ್ಲಿ ಒಂದು ಆಂಬುಲೆನ್ಸ್ ಉಪ್ಪಿನಂಗಡಿ ಭಾಗದಲ್ಲಿ ಕಾರ್ಯನಿರ್ವಹಿಸಿದರೆ, ಇನ್ನೊಂದು ಆಂಬುಲೆನ್ಸ್ ಪುತ್ತೂರು ಭಾಗದಲ್ಲಿ ಕಾರ್ಯ ನಿರ್ವಹಿಸಲಿದೆ.




























