ಬೆಂಗಳೂರು: ಬೇಸಿಗೆಯಲ್ಲಿ ಐಸ್ ಕ್ರೀಂ, ಕೂಲ್ ಡ್ರಿಂಕ್ಸ್‌ಗೆ ಹೆಚ್ಚು ಬೇಡಿಕೆ ಇರುತ್ತದೆ. ಮತ್ತೊಂದೆಡೆ ಅದಕ್ಕಿಂತ ದುಪ್ಪಟ್ಟು ಬೇಡಿಕೆ ಬಿಯರ್‌ಗಳಿಗೆ ಇರೋದನ್ನು ಕಾಣಬಹುದು. ಆದರೆ, ಇದೀಗ ಮದ್ಯ ಪ್ರಿಯರಿಗೆ ಬ್ಯಾಡ್ ನ್ಯೂಸ್ ಸಿಕ್ಕಿದ್ದು, ಇನ್ನೆರಡು ತಿಂಗಳ ಕಾಲ ಬಿಯರ್ ಸಿಗುವುದು ಕಷ್ಟವಾಗಲಿದೆ. ಯಾಕೆಂದರೆ, ಬೇಡಿಕೆಗೆ ತಕ್ಕಂತೆ ಸರಬರಾಜು ಇಲ್ಲದ ಕಾರಣ ರಾಜ್ಯದಲ್ಲಿ ಬಿಯರ್ ಅಭಾವ ಉಂಟಾಗಿರುವುದು ಕಂಡುಬಂದಿದೆ.
ಬೇಸಿಗೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚುತ್ತಿದ್ದಂತೆ ರಾಜ್ಯದಲ್ಲಿ ಬಿಯರ್ ಮಾರಾಟ ಕೂಡ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ, ಬೇಡಿಕೆಗೆ ತಕ್ಕಂತೆ ಬಿಯರ್ ಸರಬರಾಜು ಆಗುತ್ತಿಲ್ಲ. ಹೀಗಾಗಿ ಇನ್ನೂ ಎರಡು ತಿಂಗಳ ಕಾಲ ಬಿಯರ್ ಅಭಾವ ಮುಂದುವರಿಯುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಪ್ರಸ್ತುತ ನಿತ್ಯ 11.50 ಲಕ್ಷ ಲೀಟರ್ ಬಿಯರ್ ಮಾರಾಟವಾಗುತ್ತಿದೆ. ಬೇಸಿಗೆ ಮುನ್ನ ನಿತ್ಯ 8 ಲಕ್ಷ ಲೀಟರ್ ಬಿಯರ್ ಮಾರಾಟವಾಗುತ್ತಿತ್ತು. ಈಗ ಬೇಸಿಗೆ ಹಿನ್ನೆಲೆ ನಿತ್ಯ 2 ಲಕ್ಷ ಲೀಟರ್ ಬಿಯರ್ ಬೇಡಿಕೆ ಹೆಚ್ಚಾಗಿದೆ. ಆದರೆ, ಬೇಡಿಕೆಗೆ ತಕ್ಕಂತೆ ಬಿಯರ್ ಸರಬರಾಜು ಸಿಗುತ್ತಿಲ್ಲ. ಇದಕ್ಕೆ ಕಾರಣ ಬಿಯರ್ ತಯಾರಿಕೆಯಲ್ಲಿ ಭಾರಿ ಕುಂಠಿತವಾಗಿರುವುದು. ಬಿಯರ್ ಅಭಾವ ಇರುವ ಬಗ್ಗೆ ಅಬಕಾರಿ ಇಲಾಖೆ ಮಾಹಿತಿ ನೀಡಿದೆ. ಇದರಿಂದ ಮುಂದಿನ ಎರಡು ತಿಂಗಳ ಕಾಲ ಬಿಯರ್ ಅಭಾವ ಉಂಟಾಗಲಿದೆ ಎನ್ನಲಾಗಿದೆ.
ಈ ವರ್ಷದ ಆರಂಭದ ತಿಂಗಳಲ್ಲಿ ಬಿಯರ್ ಮಾರಾಟ ಕುಸಿತ ಕಂಡಿತ್ತು. ಕಳೆದ ವರ್ಷದ ಬೇಸಿಗೆಗೆ ಹೋಲಿಸಿದರೆ ಈ ವರ್ಷದಲ್ಲಿ ಶೇ.30 ಮಾರಾಟ ಹೆಚ್ಚಳವಾಗಿದೆ. ಅಗತ್ಯ ಇರುವಷ್ಟು ಬಿಯರ್ ಸಂಗ್ರಹ ಇದೆ ಎಂದು ಅಬಕಾರಿ ಇಲಾಖೆ ಮೂಲಗಳಿಂದ ಕಳೆದ ತಿಂಗಳು ತಿಳಿದುಬಂದಿತ್ತು. ಆದರೆ, ಇದೀಗ ಬಿಯರ್‌ಗೆ ಭಾರಿ ಬೇಡಿಕೆ ಉಂಟಾಗಿದ್ದು, ಅದಕ್ಕೆ ತಕ್ಕಂತೆ ಪೂರೈಕೆಯಾಗದಿರುವುದು ಸಮಸ್ಯೆಗೆ ಕಾರಣವಾಗಿದೆ.
ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕೂಡ ಬಿಯರ್ ಉತ್ಪಾದನೆ ಕುಸಿಯಲು ಕಾರಣವಾಗಿದೆ. ಇನ್ನು ಸಾರಿಗೆ ಸಮಸ್ಯೆ, ಚುನಾವಣೆ ಸಮಯದಲ್ಲಿ ಮಳಿಗೆಗಳಲ್ಲಿ ಹೆಚ್ಚುವರಿ ಮದ್ಯ, ಬಿಯರ್ ಸಂಗ್ರಹಣೆ ಮೇಲೆ ನಿರ್ಬಂಧ ಹೇರಿರುವುದು ಕೂಡ ಬಿಯರ್ ಪೂರೈಕೆ ಕುಸಿಯಲು ಕಾರಣವಾಗಿದೆ.
ಬಿಸಿಲಿನ ಝಳದಿಂದ ಹೊರಬರಲು ಜನರು ಹಾಟ್ ಡ್ರಿಂಕ್ಸ್‌ಗಳಿಗಿಂತ ಬೇಸಿಗೆಯಲ್ಲಿ ಬಿಯರ್ ಹೆಚ್ಚು ಕುಡಿಯುತ್ತಾರೆ. ಜತೆಗೆ ಈ ವರ್ಷ ಮಾರಾಟ ಹೆಚ್ಚಳವಾಗಲು ಲೋಕಸಭಾ ಚುನಾವಣೆಯ ಕೊಡುಗೆಯೂ ಇದೆ. ಬಿಯರ್ ಕುಡಿದರೆ ಬಿಸಿಲ ಧಗೆಯಿಂದ ಹೊರಬರಬಹುದು ಎಂದು ನಂಬಲಾಗಿದ್ದು, ಇದು ಬಿಯರ್ ಬಳಕೆ ಹೆಚ್ಚಳವಾಗಲು ಕಾರಣವಾಗಿದೆ. ಇನ್ನು ಮದ್ಯ ಮಾರಾಟದಿಂದ ಈ ವರ್ಷ ರಾಜ್ಯ ಸರ್ಕಾರ 36 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಿದೆ. ಆರಂಭದಲ್ಲಿಯೇ ಉತ್ತಮ ಮಾರಾಟ ಕಂಡು ಬಂದಿರುವುದರಿಂದ ಆದಾಯ ಹೆಚ್ಚುವ ನಿರೀಕ್ಷೆ ಇದೆ.