ರಾಂಚಿ: ಜಾರಿ ನಿರ್ದೇಶನಾಲಯ ದ ಅಧಿಕಾರಿಗಳು ಸೋಮವಾರ ಜಾರ್ಖಂಡ್‌ನ ರಾಜಧಾನಿ ರಾಂಚಿಯ ಅನೇಕ ಸ್ಥಳಗಳಲ್ಲಿ ಸರಣಿ ದಾಳಿ ನಡೆಸಿ ಭರ್ಜರಿ ಬೇಟೆಯಾಡಿದ್ದಾರೆ ಈ ವೇಳೆ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ, ಕಾಂಗ್ರೆಸ್ ಮುಖಂಡ ಅಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಮನೆಯಲ್ಲಿ ಲೆಕ್ಕವಿಲ್ಲದ 25 ಕೋಟಿ ರೂ.ಗಿಂತ ಅಧಿಕ ಹಣವನ್ನು ವಶಕ್ಕೆ ಪಡೆಯಲಾಗಿದೆ.
2023ರಲ್ಲಿ ಕೆಲವು ಯೋಜನೆಗಳ ಅನುಷ್ಠಾನಕ್ಕಾಗಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಇಡಿ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಎಂಜಿನಿಯರ್ ವೀರೇಂದ್ರ ರಾಮ್ ಎಂಬವರು ಬಂಧಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿಯ ಮನೆಯ ಮೇಲೆಯೂ ದಾಳಿ ಮಾಡಿದೆ. ಸದ್ಯ ನೋಟಿನ ಕಂತೆ ನೋಡಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ದಾಳಿ ವೇಳೆ ನಕಲಿ ಪ್ಯಾನ್ ಕಾರ್ಡ್‌ಗಳ ಮೂಲಕ ಶೆಲ್ ಕಂಪನಿಗಳನ್ನು ರಚಿಸುವುದರಿಂದ ಹಿಡಿದು ಚರ ಮತ್ತು ಸ್ಥಿರಾಸ್ತಿಗಳ ಖರೀದಿಗಾಗಿ ಕೋಟಿ ರೂ.ಗಳ ನಗದು ವಿನಿಮಯ ನಡೆಸಿದ ಮಾಹಿತಿಯೂ ಸಿಕ್ಕಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ರಾಂಚಿಯ ಸೈಲ್ ಸಿಟಿ ಸೇರಿದಂತೆ ಒಂಬತ್ತು ಸ್ಥಳಗಳಲ್ಲಿ ತನಿಖಾ ಸಂಸ್ಥೆ ಏಕಕಾಲದಲ್ಲಿ ದಾಳಿ ಕೈಗೊಂಡಿದೆ. ಇಡಿಯ ಒಂದು ತಂಡ ಸೋಮವಾರ ಬೆಳಗ್ಗೆ, ರಸ್ತೆ ನಿರ್ಮಾಣ ವಿಭಾಗದ ಇಂಜಿನಿಯರ್ ವಿಕಾಸ್ ಕುಮಾರ್ ಅವರ ಮನೆ ಮೇಲೂ ದಾಳಿ ನಡೆಸಿತ್ತು. ಇನ್ನೊಂದು ತಂಡ ಬರಿಯಾತು, ಮೊರಬದಿ ಮತ್ತು ಬೋಡಿಯಾ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.