ಪಟ್ಟಣಂತಿಟ್ಟ : ಜಗತ್ತಿನಾದ್ಯಂತ ಅಪಾರ ಸಂಖ್ಯೆಯ ಭಕ್ತರನ್ನು ಒಳಗೊಂಡಿರುವ ಶಬರಿಮಲೆ ದೇವಸ್ಥಾನಕ್ಕೆ ಹೋಗುವವರು ಇನ್ನು ಮುಂದೆ ಕಡ್ಡಾಯವಾಗಿ ವರ್ಚ್ಯುವಲ್ ಕ್ಯೂನಲ್ಲಿ ಹೆಸರು ನೋಂದಾಯಿಸಲೇಬೇಕು. ವರ್ಚ್ಯುವಲ್ ಕ್ಯೂನಲ್ಲಿ ಹೆಸರು ನೋಂದಾಯಿಸಿದರೆ ಮಾತ್ರ ಶಬರಿಮಲೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದರ್ಶನಕ್ಕೆ ಅವಕಾಶ ಸಿಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯಾದ ತಿರುವಾಂಕೂರ್ ದೇವೋಸ್ವಂ ಬೋರ್ಡ್ (ಟಿಡಿಬಿ) ತಿಳಿಸಿದೆ.
ವರ್ಚ್ಯುವಲ್ ಕ್ಯೂ ಪದ್ಧತಿಯಲ್ಲಿ ತಮ್ಮ ಹೆಸರು ನೋಂದಾಯಿಸಲು ಇಚ್ಛಿಸುವ ಭಕ್ತರು, ದೇವಸ್ಥಾನ ಅಧಿಕತ ವೆಬ್ ಸೈಟ್ (ಶಬರಿಮಲ ಆನ್ ಲೈನ್ ಸರ್ವೀಸಸ್) ನಲ್ಲಿ ಅಥವಾ ಕೇರಳ ರಾಜ್ಯ ಸರ್ಕಾರದ ಶಬರಿಮಲ ಶ್ರೀ ಧರ್ಮಶಾಸ್ತ್ರ ಟೆಂಪಲ್ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ತಮ್ಮ ಹೆಸರು ನೋಂದಾಯಿಸಬಹುದು.
ದೇವಸ್ಥಾನ ಆಡಳಿತ ಮಂಡಳಿಯ ಈ ನಿರ್ಧಾರ ಅನೇಕ ಭಕ್ತರಿಗೆ ನಿರಾಸೆ ತಂದಿದೆ. ಇದಲ್ಲದೆ, ಭಕ್ತರಿಗಾಗಿ ದೇವಸ್ಥಾನದ ಪ್ರಾಂಗಣಗಳಲ್ಲಿ ಉಚಿತ ಸೇವೆಗಳನ್ನು ನೀಡುವ ಹಲವಾರು ಸಂಘ, ಸಂಸ್ಧೆಗಳಿಗೂ ಅಸಮಾಧಾನ ತಂದಿದೆ. ಆದರೆ, ಅತ್ತ, ಟಿಡಿಬಿ ಮಾತ್ರ ತನ್ನ ಆದೇಶವನ್ನು ಸಮರ್ಥಿಸಿಕೊಂಡಿದೆ. ದೇವಸ್ಥಾನದಲ್ಲಿ ಪ್ರತಿ ವರ್ಷವೂ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಪಾರ ಸಂಖ್ಯೆಯ ಭಕ್ತರು ಶ್ರೀ ಅಯ್ಯಪ್ಪ ಸ್ವಾಮಿಯ ಸನ್ನಿಧಾನಕ್ಕೆ ಆಗಮಿಸಿದರೆ ಭಕ್ತರನ್ನು ಹಾಗೂ ಅಲ್ಲಿ ಕಲ್ಪಿಸಲಾಗಿರುವ ವ್ಯವಸ್ಥೆಗಳನ್ನು ನಿರ್ವಹಿಸುವುದು ತುಂಬಾ ಕಷ್ಟವಾಗುತ್ತದೆ. ಹಾಗಾಗಿಯೇ ಈ ನಿರ್ಧಾರ ಅನಿವಾರ್ಯವಾಗಿದೆ ಎಂದು ಮಂಡಳಿ ತಿಳಿಸಿದೆ.
ಇತ್ತೀಚೆಗೆ, ಶಬರಿಮಲೈ ಸನ್ನಿಧಾನಕ್ಕೆ ದಿನಕ್ಕೆ 80 ಸಾವಿರ ಜನರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕೊಡುವುದಾಗಿ ಹೇಳಿದ್ದ ಮಂಡಳಿ, ಶಬರಿಮಲೈನ ಸುಮಾರು 9 ಕೇಂದ್ರಗಳಲ್ಲಿ ಜಾರಿಯಲ್ಲಿದ್ದ ಸ್ಪಾಟ್ ಬುಕ್ಕಿಂಗ್ ಪದ್ಧತಿಯನ್ನೂ ಮಂಡಳಿ ರದ್ದುಗೊಳಿಸಿತ್ತು. ಈ ಬಾರಿಯ ‘ಮಂಡಲ – ಮಕರವಿಳಕ್ಕು’ ಸಂದರ್ಭದಲ್ಲಿ ಕ್ಷೇತ್ರಕ್ಕೆ ಲಕ್ಷಾನುಲಕ್ಷ ಭಕ್ತರು ಆಗಮಿಸಿದ್ದರು. ಸ್ಪಾಟ್ ಬುಕ್ಕಿಂಗ್ ನಿಂದಾಗಿ ಭಕ್ತಾದಿಗಳ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚಾಗಿತ್ತು. ಭಕ್ತಾದಿಗಳ ನಿರ್ವಹಣೆಯು ತುಂಬಾ ಕಷ್ಟಕರ ಎಂದೆನಿಸಿದ್ದರಿಂದಾಗಿ ಮಂಡಳಿಯು ಸ್ಪಾಟ್ ಬುಕ್ಕಿಂಗ್ ಗೂ ತಿಲಾಂಜಲಿ ನೀಡಿದೆ.
ಈ ದೇವಸ್ಥಾನದ ಆಡಳಿತವು ಕೇರಳ ಸರ್ಕಾರದ ಸುಪರ್ದಿಯಲ್ಲಿದೆ. ಕಳೆದ ಸೀಸನ್ ನಲ್ಲಿ ಶಬರಿಮಲೈ ಕ್ಷೇತ್ರದಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ ಎಂದ ಕೇರಳ ಸರ್ಕಾರ ತಿಳಿಸಿದ್ದರೂ, ಅಪಾರ ಸಂಖ್ಯೆಯ ಭಕ್ತಾದಿಗಳಿಂದಾಗಿ ಕ್ಷೇತ್ರ ತುಂಬಿ ಹೋಗಿತ್ತು. ನೂಕಾಟ, ತಳ್ಳಾಟ, ಮೂಲಸೌಕರ್ಯಗಳಿಗಾಗಿ ಪರದಾಟ ಮುಂತಾದ ಸಮಸ್ಯೆಗಳು ಎಷ್ಟು ವಿಪರೀತವಾಗಿತ್ತೆಂದರೆ, ಕೇರಳ ಹೈಕೋರ್ಟ್ ಮಧ್ಯೆ ಪ್ರವೇಶಿಸಿ, ಸರ್ಕಾರಕ್ಕೆ ಕೆಲವಾರು ಸೂಚನೆಗಳನ್ನು ನೀಡಬೇಕಾಯಿತು. ಅಪಾರ ಸಂಖ್ಯೆಯ ಭಕ್ತರನ್ನು ನಿರ್ವಹಿಸಲು ಆ ಮೊದಲೇ ಕೈಗೊಳ್ಳಲಾಗಿದ್ದ ಎಲ್ಲಾ ಕ್ರಮಗಳೂ ವ್ಯರ್ಥವಾಗಿದ್ದವು. ಆ ಹಿನ್ನೆಲೆಯಲ್ಲಿ, ವರ್ಚ್ಯುವಲ್ ಕ್ಯೂ ಪದ್ಧತಿಯನ್ನು ದೇವಸ್ಥಾನದ ಆಡಳಿತ ಮಂಡಳಿ ಕಡ್ಡಾಯಗೊಳಿಸಿದೆ.