ಹಾಸನ : 2022ರ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಯುವ ಮುಂಖಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಮೂವರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ತಂಡ ಬಂಧಿಸಿದೆ.
ಸುಳ್ಯ ಮೂಲದ ಮುಸ್ತಾಫ್ ಪೈಚಾರ್, ಸೋಮವಾರಪೇಟೆ ಮೂಲದ ಇಲಿಯಾಸ್ ಹಾಗೂ ಸಿರಾಜ್‌ನ್ನು ವಶಕ್ಕೆ ಪಡೆಯಲಾಗಿದೆ. ಸಕಲೇಶಪುರ ತಾಲೂಕಿನ ಆನೆಮಹಲ್‌ನಲ್ಲಿ ಆರೋಪಿಗಳನ್ನು ಎನ್‌ಐಎ ವಶಕ್ಕೆ ಪಡೆದಿದೆ.
ಆನೆಮಹಲ್‌ನ ಸಿರಾಜ್ ಬಳಿ ಕೆಲಸಕ್ಕೆ ಸೇರಿದ್ದ ಮುಸ್ತಾಫಾ ಪೈಚಾರ್ ಹಾಗೂ ಇಲಿಯಾಸ್ ಬಂಧಿಸಿದ್ದು, ಈ ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಸಿರಾಜ್ ಎನ್‌ಐಎ ವಶಕ್ಕೆ ಪಡೆದಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಸುಳ್ಯದ ಶಾಂತಿನಗರ ನಿವಾಸಿ ಮುಸ್ತಾಫ್ ಪೈಚಾರ್ (43) ನಾಲ್ಕನೇ ಆರೋಪಿಯಾಗಿದ್ದ.
ಪ್ರವೀಣ ನೆಟ್ಟಾರು ಕೊಲೆ ನಡೆದ ಸಂದರ್ಭದಲ್ಲಿ ಬಿಜೆಪಿ ಪಕ್ಷ ಆಡಳಿತದಲ್ಲಿತ್ತು. ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದರು. ನಳೀನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿದ್ದರು. ಬಿಜೆಪಿ ಆಡಳಿತದಲ್ಲೇ ತಮ್ಮದೇ ಕಾರ್ಯಕರ್ತನೋರ್ವನ ಹತ್ಯೆ ಇಡೀ ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆ ಬಳಿಕ ಬೆಳ್ಳಾರೆಗೆ ನಳೀನ್ ಕುಮಾರ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾರು ಅಲ್ಲಾಡಿಸಿ, ಕೆಳಗಿಳಿಯದಂತೆ ಆಕ್ರೋಶ ವ್ಯಕ್ತವಾಗಿತ್ತು. ಇದು ರಾಜ್ಯ ಸರ್ಕಾರದ ಬುಡವೇ ಅಲುಗಾಡುವಂತೆ ಭಯ ಹುಟ್ಟಿಸಿದ ಪ್ರಕರಣವಾಗಿತ್ತು.
2022ರ ನವೆಂಬರ್‌ನಲ್ಲಿ ಮೊಹಮ್ಮದ್ ಮುಸ್ತಾಫ್ ಪೈಚಾರ್ ತಲೆಮರೆಸಿಕೊಂಡಿದ್ದ. ಈತನೂ ಸೇರಿದಂತೆ ಉಮರ್ ಫಾರೂಕ್, ತುಫೈಲ್, ಅಬೂಬಕ್ಕರ್ ಸಿದ್ದಿಕ್ ಪತ್ತೆಗೆ ಒಟ್ಟು 14 ಲಕ್ಷ ರು. ಬಹುಮಾನ ಘೋಷಿಸಲಾಗಿತ್ತು. ಈ ಪೈಕಿ ಮಡಿಕೇರಿ ನಿವಾಸಿ ತುಫೈಲ್ ನನ್ನು ಈ ಹಿಂದೆ ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.
ಒಟ್ಟು 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಸುಮಾರು 1500 ಪುಟಗಳ ಚಾರ್ಜ್ಶೀಟ್ ಈ ಹಿಂದೆ ಎನ್‌ಐಎ ಸಲ್ಲಿಸಿತ್ತು. ‘ಸಮಾಜದಲ್ಲಿ-ಜನರಲ್ಲಿ ಭಯ ಹುಟ್ಟಿಸುವ ಸಲುವಾಗಿ ಪ್ರವೀಣ್ ನೆಟ್ಟಾರು ಅವರನ್ನು ಪಿಎಫ್ಐ ಹತ್ಯೆ ಮಾಡಿದೆ. ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿ ಸೃಷ್ಟಿಸುವುದು ಆ ಸಂಘಟನೆ ಮುಖಂಡರ ಪ್ರಮುಖ ಉದ್ದೇಶ. 2047ರ ಹೊತ್ತಿಗೆ ಇಸ್ಲಾಮಿಕ್ ಆಳ್ವಿಕೆ ಸ್ಥಾಪಿಸುವ ನಿಟ್ಟಿನಲ್ಲಿ ಪಿಎಫ್ಐ ಕಾರ್ಯಕರ್ತರು ಕಾರ್ಯಾಚರಣೆ ನಡೆಸುತ್ತಿದ್ದರು. ವಿವಿಧ ಹಿಂದು ಮುಖಂಡರ ಹತ್ಯೆಗಳನ್ನು ನಡೆಸಲು ಸೇವಾ ತಂಡಗಳು, ಕಿಲ್ಲರ್ ಸ್ಕ್ವಾಡ್ಗಳು ಎಂಬ ರಹಸ್ಯ ತಂಡಗಳನ್ನು ಪಿಎಫ್ಐ ರಚನೆ ಮಾಡಿಕೊಂಡಿತ್ತು. ಒಬ್ಬ ವ್ಯಕ್ತಿಯನ್ನು ಟಾರ್ಗೆಟ್ ಮಾಡಿ, ಆತನನ್ನು ಕೊಲ್ಲಲು ಯೋಜನೆ ರೂಪಿಸುತ್ತಿದ್ದರು. ಅದಕ್ಕಾಗಿ ಸದಸ್ಯರಿಗೆ ತರಬೇತಿ ನೀಡುತ್ತಿದ್ದರು. ಬಳಿಕ ಆಯಾ ಜಿಲ್ಲಾ ಮುಖ್ಯಸ್ಥನಿಗೆ ಸೂಚನೆ ನೀಡುತ್ತಿದ್ದರು. ಹೀಗೆ ಟಾರ್ಗೆಟ್ ಆದ ವ್ಯಕ್ತಿಗಳಲ್ಲಿ ಪ್ರವೀಣ್ ನೆಟ್ಟಾರು ಕೂಡ ಒಬ್ಬನಾಗಿದ್ದ’ ಎಂಬ ಅಂಶಗಳನ್ನು ಎನ್‌ಐಎ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ.
ಮಹಮ್ಮದ್ ಶಿಯಾಬ್, ಅಬ್ದುಲ್ ಬಶೀರ, ರಿಯಾಝ್, ಮುಸ್ತಫಾ ಪೈಚಾರ್, ಮಸೂದ್ ಕೆ ಎ, ಕೊಡಾಜೆ ಮೊಹಮ್ಮದ್ ಶರೀಫ್, ಅಬೂಬಕ್ಕರ್ ಸಿದ್ದಿಕ್, ನೌಫಲ್ ಎಂ., ಇಸ್ಮಾಯಿಲ್ ಶಾಫಿ.ಕೆ., ಕೆ ಮಹಮ್ಮದ್ ಇಕ್ಬಾಲ್, ಶಹೀದ್ ಎಂ., ಮಹಮ್ಮದ್ ಶಫೀಕ್ ಜಿ., ಉಮ್ಮರ್ ಫಾರೂಕ್ ಎಂ.ಆರ್., ಅಬ್ದುಲ್ ಕಬೀರ್ ಸಿ.ಎ., ಮುಹಮ್ಮದ್ ಇಬ್ರಾಹಿಂ ಶಾ., ಸೈನುಲ್ ಅಬಿದ್ ವೈ., ಶೇಖ್ ಸದ್ದಾಂ ಹುಸೇನ್., ಜಾಕಿಯಾರ್ ಎ., ಎನ್.ಅಬ್ದುಲ್ ಹಾರಿಸ್., ತುಫೈಲ್ ಎಂ. ಎಚ್. ಎಂಬುವರ ಹೆಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ.