ಹುಬ್ಬಳ್ಳಿ:ಎರಡು ಹಿರಿಯ ಜೀವಗಳಿಗೆ ವಾಸ ಮಾಡಲಿಕ್ಕೆ ಒಂದು ಸ್ವಂತ ಸೂರು ಇರಲಿಲ್ಲ. ಇದರಿಂದಾಗಿ ಹಾದಿ ಬೀದಿಯೇ ಅವರಿಗೆ ಮನೆಯಾಗಿತ್ತು. ಇದನ್ನ ಮನಗಂಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಸಂಘ ಹಾಗೂ ಗುಡೇನಕಟ್ಟೆ ಗ್ರಾಮಸ್ಥರು ಆವರಿಬ್ಬರಿಗೆ ಒಂದು ಸ್ವಂತ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ.
ಗುಡೇನಕಟ್ಟಿ ಗ್ರಾಮಕ್ಕೆ ಸುಮಾರು 30 ವರ್ಷಗಳ ಹಿಂದೆ ಈ ಇಬ್ಬರೂ ಕೆಲಸಕ್ಕಾಗಿ ವಲಸೆ ಬಂದಿದ್ದರು. ಇವರಿಬ್ಬರ ಹೆಸರು ಬಸಮ್ಮ. ಸುಮಾರು 30 ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆಯಲ್ಲಿ ಬರಗಾಲದ ಛಾಯೆ ಆವರಿಸಿದ ಸಂದರ್ಭದಲ್ಲಿ ಇವರಿಬ್ಬರೂ ಅಲ್ಲಿಂದ ವಲಸೆ ಬಂದಿದ್ದರು. ನಂತರ ದಿನಗಳಲ್ಲಿ ಅವರಿವರ ಮನೆಯಲ್ಲಿ ಕೆಲಸ ಮಾಡುತ್ತಾ ತಮ್ಮ ಜೀವನ ಸಾಗಿಸುತ್ತಿದ್ದರು.
ಈಗ ಇಬ್ಬರೂ ವೃದ್ಧೆಯರಾಗಿದ್ದಾರೆ. ಮನೆಗಳ ಕೆಲಸ ಮಾಡಲು ಮೊದಲಿನಷ್ಟು ತಾಕತ್ತಿಲ್ಲ. ಆದರೆ, ಗ್ರಾಮದಲ್ಲಿ ಎಲ್ಲರ ಮನಗೆದ್ದಿದ್ದಾರೆ. ಈ ಮಹಿಳೆಯರಿಗೆ ವಾಸ್ತವ್ಯಕ್ಕೆ ಮನೆ ಇಲ್ಲದಿದ್ದರಿಂದ ಇವರಿಗೆ ಗ್ರಾಮಸ್ಥರು ನೆರವಿಗೆ ಬಂದಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿಯವರಾದ ಶ್ರೀ ವೀರೇಂದ್ರ ಹೆಗಡೆಯವರ ಧರ್ಮಪತ್ನಿ ಹೆಸರಿನಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಈ ಗ್ರಾಮದಲ್ಲಿ ಜನಸೇವೆಯನ್ನು ಮಾಡುತ್ತಿದ್ದು, ಅನಾಥರಿಗೆ, ಸೂರಿಲ್ಲದವರಿಗೆ ಆಸರೆ ನೀಡುತ್ತಿದೆ. ಕಾಯಿಲೆಯಿಂದ ಬಳಲುತ್ತಿದ್ದವರಿಗೆ ವಾತ್ಸಲ್ಯ ಯೋಜನೆಯಡಿಯಲ್ಲಿ ಮನೆ ನಿರ್ಮಿಸುತ್ತಿದೆ. ಈ ವಿಷಯ ತಿಳಿದು ಗ್ರಾಮಸ್ಥರು, ಈ ವೃದ್ಧೆಯರಿಗೆ ಮನೆ ಕಟ್ಟಿಕೊಡುವ ಬಗ್ಗೆ ಆ ಸಂಸ್ಥೆಯ ಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದರು. ಅದರಂತೆ, ಈ ಇಬ್ಬರೂ ವೃದ್ಧೆಯರಿಗೆ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮನೆ ನಿರ್ಮಿಸಿ ಕೊಟ್ಟಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರ ಪತ್ನಿ ಹೇಮಾವತಿ ಹೆಗಡೆಯವರ ಸೂಚನೆಯ ಮೇರೆಗೆ ಶುಕ್ರವಾರ ಶಾಸ್ತ್ರೋಕ್ತವಾಗಿ ಮನೆ ಗ್ರಹಪ್ರವೇಶ ಮಾಡಲಾಯಿತು. ಗೃಹಪ್ರವೇಶ ನಂತರ ವೃದ್ಧೆ ಬಸಮ್ಮ ಮಾತನಾಡಿ, “ನಮ್ಮಂಥ ಬಡಪಾಯಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿಯವರು ಹಾಗೂ ಊರಿನ ಮುಖಂಡರು ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಅವರಿಗೆ ನಾನು ಚಿರಋಣಿ’’ ಎಂದು ಹೇಳುತ್ತಾ ಕಣ್ಣೀರಾದರು.