ಬೆಂಗಳೂರು: 135 ಸ್ಥಾನಗಳನ್ನ ಗೆದ್ದು ಅಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲೂ ಹೆಚ್ಚಿನ ಸ್ಥಾನ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಕಾಂಗ್ರೆಸ್ ಅಧಿಕಾರಕ್ಕೇರಿದಾಗಿನಿಂದ ಸರ್ಕಾರ ಪತನದ ಮಾತುಗಳು ಕೇಳಿಬರುತ್ತಲೇ ಇವೆ. ಇದೇ ವಿಚಾರ ಈಗ ಮುನ್ನೆಲೆಗೆ ಬಂದಿರುವುದು ಪಕ್ಕದ ರಾಜ್ಯ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ನಾಥ್ ಮಾದರಿ ಆಪರೇಷನ್ ಎಲ್ಲಾ ಕಡೆ ಫೇಮಸ್ ಆಗಿದೆ. ಅದೇ ಮಾದರಿಯ ಆಪರೇಷನ್ಗೆ ಕರ್ನಾಟಕದಿಂದಲೂ ಆಹ್ವಾನ ಬಂದಿದೆ. ಚುನಾವಣೆ ಬಳಿಕ ಕರ್ನಾಟಕಕ್ಕೆ ಬರುವುದಾಗಿ ಹೇಳಿದ್ದೇನೆ ಎಂದು ಸ್ಫೋಟಕ ಮಾತುಗಳನ್ನ ಆಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಅದರಲ್ಲೂ ಕಾಂಗ್ರೆಸ್ ಮನೆಯಲ್ಲಿ ಕಂಪನ ಸೃಷ್ಟಿಸಿದೆ. ಇದರ ಮಧ್ಯ ಇದೀಗ ಸಚಿವ ಸತೀಶ್ ಜಾರಕಿಹೊಳಿ ಅವರು ಪಕ್ಷದ ಶಾಸಕರಲ್ಲಿ ಅಸಮಾಧಾನ ಇದೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದು, ಸಂಚಲನ ಮೂಡಿಸಿದೆ.
ಗೃಹ ಸಚಿವ ಪರಮೇಶ್ವರ್ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಪರಮೇಶ್ವರ್ ಭೇಟಿ ವಿಶೇಷತೆ ಏನು ಇಲ್ಲ. ಚುನಾವಣೆ ವಿಚಾರವಾಗಿ ಮಾತುಕತೆ ಮಾಡಿದ್ದೇವೆ. ಎಷ್ಟು ಸೀಟ್ ಗೆಲ್ಲುತ್ತೇವೆ ಎಂಬ ಚರ್ಚೆ ಮಾಡಿದ್ದೇವೆ. ಡಿಸಿಎಂ ಬಗ್ಗೆ ಚುನಾವಣೆ ವೇಳೆ ಕೂಗು ಇತ್ತು. ಈಗ ಚುನಾವಣೆ ಮುಗಿದಿದೆ. ಚುನಾವಣೆಗೆ ಅನುಕೂಲ ಆಗಲಿ ಅಂತ ಕೂಗು ಇತ್ತು. ಈಗ ಡಿಸಿಎಂ ಕೂಗು ಇಲ್ಲ. ಸರ್ಕಾರ ಬಿಳಿಸಲು ಸುಮ್ಮನೆ ಹೇಳುತ್ತಾರೆ. ಸರ್ಕಾರ ಏನು ಬಿದ್ದು ಹೋಯ್ತಾ. ಸುಮ್ಮನೆ ಸರ್ಕಾರ ಬಿಳುತ್ತೆಅಂತಾರೆ. ಶಾಸಕರ ಅಸಮಧಾನ ಇದ್ದೆ ಇರುತ್ತೆ. ಆಡಳಿತ ಪಕ್ಷ ಅಂದ ಮೇಲೆ ಅಸಮಧಾನ ಸಹಜ ಎಂದರು. ಈ ಮೂಲಕ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಸತೀಶ್ ಜಾರಕಿಹೊಳಿ ಒಪ್ಪಿಕೊಂಡರು.
ಹೌದು..ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಕೆಲ ವಿಚಾರಕ್ಕೆ ಸತೀಶ್ ಜಾರಕಿಹೊಳಿ ಪಕ್ಷದ ನಾಯಕರ ನಡೆಗೆ ಮುನಿಸಿಕೊಂಡಿದ್ದರು. ಅಲ್ಲದೇ ತಮ್ಮ ಆಪ್ತ ಶಾಸಕರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲು ತೀರ್ಮಾನಿಸಿದ್ದರು. ಈ ಮೂಲಕ ಹೈಕಮಾಂಡ್ಗೆ ಎಚ್ಚರಿಕೆ ಸಂದೇಶ ರವಾನಿಸಲು ಮುಂದಾಗಿದ್ದರು. ಇದನ್ನು ಅರಿತ ಹೈಕಮಾಂಡ್ ಕೂಡಲೇ ಮಧ್ಯಪ್ರವೇಶಿಸಿ ಸತೀಶ್ ಜಾರಕಿಹೊಳಿ ಅವರನ್ನು ಸಮಾಧಾನ ಮಾಡುವಲ್ಲಿ ಯಶಸ್ವಿಯಾಗಿತ್ತು. ಇದೀಗ ಶಾಸಕರಲ್ಲಿ ಅಸಮಾಧಾನ ಇದೆ ಎಂದು ಬಹಿರಂಗ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಆಡಿರೋ ಇದೇ ಮಾತುಗಳು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.