ನವದೆಹಲಿ: ಬಿಜೆಪಿ ಬೆಳವಣಿಗೆಗೆ ಆರ್‌ಎಸ್‌ಎಸ್ ಕೊಡುಗೆ ನೀಡಿದೆ. ಈಗ ಪಕ್ಷ ತನ್ನದೇ ಆದ ವ್ಯವಹಾರ ನಡೆಸಲು, ನಿರ್ಧಾರ ತೆಗೆದುಕೊಳ್ಳಲು ಸಮರ್ಥವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಆರ್‌ಎಸ್‌ಎಸ್ ಸೈದ್ಧಾಂತಿಕ ನಿಲುವಾಗಿದ್ದು, ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮಾಜಿ ಪ್ರದಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲಕ್ಕೆ ಹೋಲಿಸಿದರೆ ಪ್ರಸ್ತುರ ಆರ್‌ಎಸ್‌ಎಸ್‌ನ ಉಪಸ್ಥಿತಿ ಬಿಜೆಪಿಯಲ್ಲಿ ಹೇಗೆ ಬದಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ನಡ್ಡಾ ಅವರು, ʼʼಆರಂಭದಲ್ಲಿ, ನಾವು ಕಡಿಮೆ ಸಾಮರ್ಥ್ಯವನ್ನು ಹೊಂದಿದ್ದೆವು ಮತ್ತು ಆಗ ಆರ್‌ಎಸ್‌ಎಸ್‌ನ ಅಗತ್ಯವಿತ್ತು. ಇಂದು ನಾವು ಬೆಳೆದಿದ್ದೇವೆ ಮತ್ತು ನಾವು ಸಮರ್ಥರಾಗಿದ್ದೇವೆ. ಬಿಜೆಪಿ ತನ್ನಷ್ಟಕ್ಕೆ ತಾನೇ ಜವಾಬ್ದಾರಿ ತೆಗೆದುಕೊಳ್ಳುತ್ತಿದೆ. ಅದೇ ವ್ಯತ್ಯಾಸʼʼ ಎಂದು ಹೇಳಿದ್ದಾರೆ.
ಹಾಗಾದರೆ ಪ್ರಸ್ತುತ ಬಿಜೆಪಿಗೆ ಆರ್‌ಎಸ್‌ಎಸ್‌ನ ಬೆಂಬಲದ ಅಗತ್ಯವಿಲ್ಲವೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನೋಡಿ, ಪಕ್ಷ ಬೆಳೆದಿದೆ ಮತ್ತು ಪ್ರತಿಯೊಬ್ಬರೂ ತಮ್ಮದೇ ಆದ ಜವಾಬ್ದಾರಿಗಳನ್ನು ಹೊಂದಿದ್ದಾರೆ. ಆರ್‌ಎಸ್‌ಎಸ್ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಮತ್ತು ನಮ್ಮದು ರಾಜಕೀಯ ಸಂಘಟನೆ. ಹೀಗಾಗಿ ಇಲ್ಲಿ ಅಗತ್ಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ಸೈದ್ಧಾಂತಿಕ ರಂಗ. ನಾವು ನಮ್ಮ ವ್ಯವಹಾರಗಳನ್ನು ನಮ್ಮದೇ ಆದ ರೀತಿಯಲ್ಲಿ ನಿರ್ವಹಿಸುತ್ತಿದ್ದೇವೆ. ರಾಜಕೀಯ ಪಕ್ಷಗಳು ಅದನ್ನೇ ಮಾಡಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಥುರಾ ಮತ್ತು ಕಾಶಿಯ ವಿವಾದಿತ ಸ್ಥಳಗಳಲ್ಲಿ ದೇವಾಲಯಗಳನ್ನು ನಿರ್ಮಿಸುವ ಯಾವುದೇ ಯೋಜನೆಯನ್ನು ಬಿಜೆಪಿ ಹೊಂದಿಲ್ಲ ಎಂದು ನಡ್ಡಾ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, “ಬಿಜೆಪಿಗೆ ಅಂತಹ ಯಾವುದೇ ಆಲೋಚನೆ, ಯೋಜನೆ ಅಥವಾ ಬಯಕೆ ಇಲ್ಲ. ಈ ಕುರಿತು ಯಾವುದೇ ಚರ್ಚೆಗಳೂ ನಡೆದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಬಡವರು, ಶೋಷಿತರು, ದಲಿತರು, ಮಹಿಳೆಯರು, ಯುವಕರು, ರೈತರತ್ತ ಗಮನ ಕೇಂದ್ರೀಕರಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. “ಈ ವಿಭಾಗಗಳನ್ನು ಮುಖ್ಯವಾಹಿನಿಗೆ ತರಬೇಕು ಮತ್ತು ಸಬಲೀಕರಣಗೊಳಿಸಬೇಕು. ನಾವು ಅವರನ್ನು ಬಲಪಡಿಸಲು ಯತ್ನಿಸುತ್ತಿದ್ದೇವೆ” ಎಂದು ನಡ್ಡಾ ಭರವಸೆ ನೀಡಿದ್ದಾರೆ.
ಯೋಗಿ ಆದಿತ್ಯನಾಥ್ ಮತ್ತು ಹಿಮಂತ ಬಿಸ್ವ ಶರ್ಮಾ ಅವರಂತಹ ಬಿಜೆಪಿ ನಾಯಕರು ತಮ್ಮ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಕಾಶಿ ಮತ್ತು ಮಥುರಾದಲ್ಲಿನ ದೇವಾಲಯಗಳ ಬಗ್ಗೆ ಮಾತನಾಡಿದ್ದಾರೆ ಎಂಬುದನ್ನು ನೆನಪಿಸಿದಾಗ, “ಬಿಜೆಪಿ ತನ್ನ ಪಾಲಂಪುರ್ ನಿರ್ಣಯದಲ್ಲಿ (ಜೂನ್ 1989) ರಾಮ ಮಂದಿರದ ಬೇಡಿಕೆಯನ್ನು ಸೇರಿಸಿತ್ತು. ಸುದೀರ್ಘ ಹೋರಾಟದ ನಂತರ ದೇವಾಲಯ ನಿರ್ಮಾಣದ ಕನಸು ನನಸಾಯಿತು. ರಾಮ ಮಂದಿರ ನಮ್ಮ ಕಾರ್ಯಸೂಚಿಯಲ್ಲಿತ್ತುʼʼ ಎಂದ ನಡ್ಡಾ ಅವರು, ʼʼನಮ್ಮದು ದೊಡ್ಡ ಪಕ್ಷ ಮತ್ತು ಪ್ರತಿಯೊಬ್ಬ ನಾಯಕರಿಗೂ ಅವರದ್ದೇ ಆದ ಭಾಷಣ ಶೈಲಿ ಇರುತ್ತದೆ. ಇದರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲʼʼ ಎಂದು ತಿಳಿಸಿದ್ದಾರೆ.