ನೆರೆಯ ರಾಜ್ಯ ಕೇರಳದಲ್ಲಿವೆಸ್ಟ್ ನೈಲ್ ಜ್ವರ ಕಾಣಿಸಿಕೊಂಡಿರುವುದರಿಂದ ಆರೋಗ್ಯ ಇಲಾಖೆ ಮೈಸೂರು ಜಿಲ್ಲೆಯಲ್ಲಿಅಲರ್ಟ್ ಆಗಿದೆ. ಕೇರಳಕ್ಕೆ ಹೊಂದಿಕೊಂಡಂತೆ ಇರುವ ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಸೇರಿದಂತೆ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಚೆಕ್‌ಪೋಸ್ಟ್‌ಗಳಲ್ಲಿಆರೋಗ್ಯ ಇಲಾಖೆ ತೀವ್ರ ನಿಗಾ ವಹಿಸಿದೆ.
ಗಡಿ ಭಾಗದಲ್ಲಿ ರೋಗದ ಲಕ್ಷಣಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಜತೆಗೆ ತಪಾಸಣಾ ಕೇಂದ್ರವನ್ನು ತೆರೆದಿದೆ. ಡೆಂಗೆಗೆ ತೆಗೆದುಕೊಳ್ಳಬೇಕಾದ ಎಲ್ಲಾಮುಂಜಾಗ್ರತೆಗಳು ಇದಕ್ಕೂ ಅನ್ವಯವಾಗುವುದರಿಂದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ರಕ್ತ ಪರೀಕ್ಷೆ ಮೂಲಕ ರೋಗದ ಬಗ್ಗೆ ನಿಗಾ ವಹಿಸಲಾಗುತ್ತಿದೆ.
‘‘ಜ್ವರ, ಮೈಕೈ ನೋವಿನ ಜತೆಗೆ ದೇಹದ ಮೇಲೆ ದದ್ದುಗಳು ಕಾಣಿಸಿಕೊಳ್ಳುವುದು ವೆಸ್ಟ್ ನೈಲ್ ಜ್ವರದ ಲಕ್ಷಣಗಳಾಗಿವೆ. ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೂಡಲೇ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ವೆಸ್ಟ್ ನೈಲ್ ಜ್ವರ ಮಾರಣಾಂತಿಕವಲ್ಲ. ಹಾಗಾಗಿ ಜನರು ಆತಂಕಕ್ಕೆ ಒಳಗಾಗಬಾರದು. ಸಾಮಾನ್ಯ ಜ್ವರಕ್ಕೆ ನೀಡುವಂತೆ ವೆಸ್ಟ್ ನೈಲ್ ಜ್ವರಕ್ಕೂ ಚಿಕಿತ್ಸೆ ನೀಡಲಾಗುತ್ತದೆ,’’ ಎಂದು ಮೈಸೂರು ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ ಕುಮಾರಸ್ವಾಮಿ ಹೇಳಿದ್ದಾರೆ.
ರೋಗ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಮಾತನಾಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಿ.ಸಿ.ಕುಮಾರಸ್ವಾಮಿ, “ಗಡಿಭಾಗಗಳಲ್ಲಿ ಫೀವರ್ ಸರ್ವೆಲೆನ್ಸ್ ಯೂನಿಟ್ ತೆರೆಯಲಾಗಿದ್ದು, ನಿಗಾ ವಹಿಸಲಾಗಿದೆ. ಎಲ್ಲೆಲ್ಲಿವಲಸೆ ಬಂದವರು ಇದ್ದಾರೋ ಅವರನ್ನು ಗುರುತಿಸಲಾಗುತ್ತಿದೆ. ವಿದೇಶ ಓಡಾಟ ಮಾಡಿ ಬಂದವರಲ್ಲಿಜ್ವರದ ಲಕ್ಷಣ ಇದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಸದ್ಯಕ್ಕೆ ಯಾವುದೇ ಆತಂಕ ಇಲ್ಲ’’ ಎಂದು ಹೇಳಿದ್ದಾರೆ .
ನೈಲ್ ಫೀವರ್ ಕಾಣಿಸಿಕೊಂಡವರಲ್ಲಿ ಮೈ ಬಿಸಿಯಾಗುವುದು, ಹೊಟ್ಟೆ ನೋವು, ತಲೆ ನೋವು, ಗಂಟಲು ನೋವು ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೊಟ್ಟೆ ಹಸಿವು ಇರಲಾರದು. ಕೈಕಾಲು ನೋವು, ಮಾಂಸ – ಖಂಡಗಳ ನೋವು ಕಾಣಿಸಿಕೊಳ್ಳಬಹುದು. ಇನ್ನೂ ಕೆಲವರಲ್ಲಿ ವಾಂತಿಯಾಗುವಂತೆ ಭಾಸವಾಗುವುದು, ವಾಂತಿಯಾಗುವುದು, ಬೇಧಿ ಕಾಣಿಸಿಕೊಳ್ಳುತ್ತದೆ. ಚರ್ಮದ ಮೇಲೆ ಗುಳ್ಳೆಗಳಂತಾಗುವುದು, ಲಿಂಫ್ ನೋಡ್ ಗಳ ಊತ ಸಹ ಕಾಣಿಸಿಕೊಳ್ಳುತ್ತದೆ.
ಇದೊಂದು ಸೊಳ್ಳೆಯಿಂದ ಹರಡುವಂಥ ವೈರಾಣುವಿನಿಂದ ಬರುವ ರೋಗ. ಫ್ಲಾವಿವಿರಿಡೆ ಎಂಬ ಜಾತಿಗೆ ಸೇರಿದ ವೈರಾಣುವಿನಿಂದಾಗಿ ಸುಸ್ತಾಗುವುದು, ಮೈಕೈ ನೋವು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೇರಳದಲ್ಲಿ ಕಳೆದ ವಾರ 4 ಪ್ರಕರಣಗಳು ದಾಖಲಾಗಿದ್ದವು. ಆದರೆ, ಈ ವಾರ ಸೋಂಕಿತರ ಸಂಖ್ಯೆ 12ಕ್ಕೇರಿದೆ. ಮಲಪ್ಪುರಂ, ಕೋಳಿಕ್ಕೋಡ್ ಹಾಗೂ ತ್ರಿಶೂರ್ ಜಿಲ್ಲೆಗಳಲ್ಲಿ ಪ್ರಕರಣಗಳು ಕಂಡುಬಂದಿವೆ.