“ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಜನ ಸಿಟ್ಟಾಗಿದ್ದಾರೆ ಎಂಬುದು ಎಲ್ಲೂ ಕೇಳಿಲ್ಲ, ನೋಡಿಲ್ಲ. ಹಾಗಾಗಿ, ಅವರೇ ಪ್ರಧಾನಿಯಾಗುವುದು ನಿಶ್ಚಿತ” ಎಂದಿದ್ದಾರೆ.
ಬರ್ಖಾ ದತ್ ಅವರೊಂದಿಗೆ ನಡೆದ ಮಾತುಕತೆ ವೇಳೆ ಪ್ರಶಾಂತ್ ಕಿಶೋರ್ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. “ಚುನಾವಣೆ ಫಲಿತಾಂಶದ ಕುರಿತು ನಾವು ಮಾತನಾಡುವಾಗ ಸಾಮಾನ್ಯ ಸಂಗತಿಗಳನ್ನು ಪರಿಗಣಿಸಿದರೆ ಸಾಕು ಒಂದು ಅಂದಾಜು ಸಿಗುತ್ತದೆ. ಕೇಂದ್ರ ಸರ್ಕಾರದ ವಿರುದ್ಧ ಅಂತಹ ಅಲೆ ಇಲ್ಲ. ನರೇಂದ್ರ ಮೋದಿ ಅವರ ಬಗ್ಗೆ ಜನರಿಗೆ ಈಗಲೂ ವಿಶ್ವಾಸವಿದೆ. ಜನರು ಮೋದಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರಬಹುದು, ಒಂದಷ್ಟು ಭರವಸೆಗಳು ಈಡೇರಿದೆ ಇರಬಹುದು. ಆದರೆ, ಮೋದಿ ಜನರಿಗೆ ಖಂಡಿತವಾಗಿಯೂ ಸಿಟ್ಟಿಲ್ಲ” ಎಂದಿದ್ದಾರೆ.
ಬಿಜೆಪಿ ಸ್ಪಷ್ಟ ಬಹುಮತ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ʼʼಈ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಪ್ರದರ್ಶನ ತೋರಲಿದೆ. ಜತೆಗೆ ಸೀಟುಗಳ ಸಂಖ್ಯೆಯನ್ನೂ ವೃದ್ಧಿಸಿಕೊಳ್ಳಲಿದೆ. ಅದರಲ್ಲಿಯೂ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಬಿಜೆಪಿ ಇನ್ನಷ್ಟು ಶಕ್ತವಾಗಲಿದೆ. ಅಲ್ಲದೆ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿಯೂ ಸೀಟು ಹೆಚ್ಚಳವಾಗುವ ನಿರೀಕ್ಷೆ ಇದೆʼʼ ಎಂದು ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿಯ ಬಗ್ಗೆ ಈಗಲೂ ಜನರಲ್ಲಿ ಸಕಾರಾತ್ಮಕ ಭಾವನೆ ಇದೆ ಎಂದಿರುವ ಪ್ರಶಾಂತ್ ಕಿಶೋರ್, ಮೋದಿ ಬ್ರ್ಯಾಂಡ್ ಮಾತ್ರ ಕುಸಿಯುತ್ತಿದೆ. ಪ್ರಧಾನಿಯ ಪ್ರಭಾವ ಕ್ಷೀಣಿಸುತ್ತಿದೆ ಎಂದು ಹೇಳಿದ್ದಾರೆ.
ಇತ್ತ ವಿರೋಧ ಪಕ್ಷಗಳ ಕಾರ್ಯ ವೈಖರಿಯನ್ನೂ ಅವರು ಟೀಕಿಸಿದ್ದಾರೆ. ಬಿಜೆಪಿ ವಿರುದ್ಧ ಪ್ರಯೋಗಿಸಬಹುದಾದ ಅನೇಕ ಅಸ್ತ್ರಗಳನ್ನು, ಅವಕಾಶಗಳನ್ನು ʼಇಂಡಿಯಾʼ ಮೈತ್ರಿಕೂಟ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ರಾಜ್ಯ ವಿಧಾನಸಭಾ ಚುನಾವಣೆಗಳ ಮೇಲೆ ಗಮನ ಕೇಂದ್ರೀಕರಿಸಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಮತ್ತು ಡಿಸೆಂಬರ್ ನಡುವಿನ ನಿರ್ಣಾಯಕ ತಿಂಗಳುಗಳು ವ್ಯರ್ಥವಾಗಿದೆ. ಇದು ʼಇಂಡಿಯಾʼ ಬಣದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ಡಿಸೆಂಬರ್‌ನಲ್ಲಿ ಮೂರು ರಾಜ್ಯಗಳಲ್ಲಿನ ಬಿಜೆಪಿಯ ಗೆಲುವು ಮತ್ತು ಜನವರಿಯಲ್ಲಿ ನಡೆದ ಅಯೋಧ್ಯೆ ರಾಮ ಮಂದಿರದ ಉದ್ಘಾಟನೆ ಕಮಲ ಪಡೆಯ ಗೆಲುವಿಗೆ ಇನ್ನಷ್ಟು ಶಕ್ತಿ ನೀಡಲಿದೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸಲಹೆ ನೀಡಿದ ಪ್ರಶಾಂತ್ ಕಿಶೋರ್, ಚುನಾವಣಾ ಫಲಿತಾಂಶಗಳು ಕಾಂಗ್ರೆಸ್ ಪರವಾಗಿಲ್ಲದಿದ್ದರೆ ಐದು ವರ್ಷಗಳ ವಿರಾಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಮೂರನೇ ಅವಧಿಯಲ್ಲಿ ಬಿಜೆಪಿಗೆ ಅನೇಕ ಕಠಿಣ ಸವಾಲು ಎದುರಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಭೂ ಮಸೂದೆ ವಿರೋಧಿ ಪ್ರತಿಭಟನೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ವಿರೋಧಿಸಿ ನಡೆದ ಪ್ರತಿಭಟನೆ ಮತ್ತು ರೈತರ ಹೋರಾಟವನ್ನು ಉಲ್ಲೇಖಿಸಿ ಅವರು ಸವಾಲುಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಈ ಎಲ್ಲ ಸವಾಲುಗಳಿಂದ ಮೋದಿ ದುರ್ಬಲ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.