ನವದೆಹಲಿ: ಲೋಕಸಭೆ ಚುನಾವಣೆ ಮುಗಿಯುವ ಹಂತಕ್ಕೆ ಬಂದಿದ್ದರೂ ರಾಜಕೀಯ ಮುಖಂಡ ವಿವಾದಾತ್ಮಕ ಹೇಳಿಕೆಗಳು ಮಾತ್ರ ನಿಲ್ಲುತ್ತಲೇ ಇಲ್ಲ. ಮಣಿಶಂಕರ್ ಅಯ್ಯರ್ ರಂತಹ ಹಿರಿಯ ನಾಯಕರ ವಿವಾದಾತ್ಮಕ ಹೇಳಿಕೆಯಿಂದ ತೀವ್ರ ಮುಜುಗರಕ್ಕೀಡಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಉದ್ಯಮಿ, ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ನೀಡಿರುವ ಹೇಳಿಕೆ ಪಕ್ಷವನ್ನು ಮತ್ತಷ್ಟು ಮುಜುಗರಕ್ಕೀಡು ಮಾಡಿದೆ. ಇಂಡಿಯಾ ಟಿವಿಗೆ ನೀಡಿದ ಸಂದರ್ಶವೊಂದರಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ವಿರುದ್ಧವೇ ಹೇಳಿಕೆ ನೀಡಿದ್ದಾರೆ. ಇದೀಗ ಅವರ ವಿಡಿಯೋ ವೈರಲ್ ಆಗುತ್ತಿದೆ.
ದೆಹಲಿಯಲ್ಲಿ ಆಪ್ ಮತ್ತು ಕಾಂಗ್ರೆಸ್ ಜಂಟಿಯಾಗಿ ಚುನಾವಣೆ ಎದುರಿಸುತ್ತಿರುವ ಬಗ್ಗೆ ಸಂದರ್ಶನಕಾರರ ಪ್ರಶ್ನೆಗೆ ಉತ್ತರಿಸಿದ ವಾದ್ರಾ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಒಬ್ಬ ದೊಡ್ಡ ಅವಕಾಶವಾದಿ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೇ ಪಕ್ಷದ ಮುಖಂಡರಾದ ಮಣಿಶಂಕರ್ ಅಯ್ಯರ್ ಬಾಯಿ ಬಡುಕ ಹಾಗೂ ದಿಗ್ವಿಜಯ್ ಸಿಂಗ್ ಅನನುಭವಿ ಎಂದು ಹೇಳಿದ್ದಾರೆ.
ಇನ್ನು ಅವರು ಇದೇ ವೇಳೆ ಭಾರತೀಯರಬಣ್ಣದ ಕುರಿತು ಮಾತನಾಡುವ ಮೂಲಕ ಭಾರಿ ವಿವಾದಕ್ಕೆ ಕಾರಣವಾಗಿದ್ದ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಬಗ್ಗೆಯೂ ಅವರು ಪ್ರತಿಕ್ರಿಯಿಸಿದ್ದು, ನಿವೃತ್ತಿ ಬಳಿಕ ಎಲ್ಲಾ ವಿಚಾರಗಳಿಂದಲೂ ನಿವೃತರಾಬೇಕು ಎಂದರು.
ಇತ್ತೀಚೆಗೆ ರಾಬರ್ಟ್ ವಾದ್ರಾ ಅವರು ರಾಜಕೀಯ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, “ನನ್ನ ಹೆಸರು, ನನ್ನ ಕೆಲಸದಿಂದ ರಾಜಕೀಯ ಪ್ರವೇಶಿಸುತ್ತೇನೆ. ಗಾಂಧಿ ಕುಟುಂಬದ ಹೆಸರು ಬಳಸಿ ರಾಜಕೀಯಕ್ಕೆ ಬರಲ್ಲ” ಎಂದಿದ್ದರು. ಎಎನ್‌ಐ ಜತೆ ಮಾತನಾಡುವಾಗ, ನೀವು ರಾಜಕೀಯ ಪ್ರವೇಶಿಸಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು. “ನಾನು ದೇಶದ ಸೇವೆ ಮಾಡುತ್ತಿದ್ದೇನೆ. ನಾನು ರಾಜಕೀಯ ಪ್ರವೇಶಿಸುವುದಿದ್ದರೆ, ನನ್ನ ಸಮಾಜ ಸೇವೆ, ನನ್ನ ಕೆಲಸ ಹಾಗೂ ನನ್ನ ಹೆಸರು ಬಳಸಿ ಪ್ರವೇಶಿಸುತ್ತೇನೆ. ಗಾಂಧಿ ಕುಟುಂಬದ ಹೆಸರು ಬಳಸಿಕೊಂಡು ನಾನು ರಾಜಕೀಯ ಪ್ರವೇಶಿಸುವುದಿಲ್ಲ. ಹೀಗೆ ಹೇಳಿದ ಮಾತ್ರಕ್ಕೆ ನಾನು ಗಾಂಧಿ ಕುಟುಂಬದ ಸದಸ್ಯ ಅಲ್ಲ ಎಂಬ ಅರ್ಥವಲ್ಲ. ಆದರೆ, ನನ್ನ ಹೆಸರು ಬಳಸಿಯೇ ನಾನು ರಾಜಕೀಯ ಪ್ರವೇಶಿಸುತ್ತೇನೆ” ಎಂದು ಹೇಳಿದರು.
ರಾಜಕೀಯದಲ್ಲಿ ಬದಲಾವಣೆಯಾಗಬೇಕಿದೆ. ನಾನು ರೈತರು, ಬಡವರ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಹೌದು, ಸೋನಿಯಾ ಗಾಂಧಿ ಸೇರಿ ಗಾಂಧಿ ಕುಟುಂಬದ ಹೆಸರು ಬಳಸಿದರೆ, ಅವರಿಂದ ಸಲಹೆ ಪಡೆದರೆ ನನಗೆ ಅನುಕೂಲವಾಗಬಹುದು. ಆದರೆ, ನನ್ನ ಕೆಲಸದಿಂದ ನಾನು ರಾಜಕೀಯಕ್ಕೆ ಬರಲು ಇಷ್ಟಪಡುತ್ತೇನೆ. ಹಾಗಂತ, ರಾಜಕೀಯ ಪ್ರವೇಶಿಸಲು ನಾನು ಸಮಾಜ ಸೇವೆ ಮಾಡುತ್ತಿಲ್ಲ. ಸೇವೆಯು ನನಗೆ ಖುಷಿ ಕೊಡುವ ವಿಚಾರವಾಗಿದೆ” ಎಂದು ಸಂದರ್ಶನದ ವೇಳೆ ಹೇಳಿದರು.
























