ಕಲಬುರಗಿ : ಎಸ್ಟಿ ಬೋರ್ಡ್ನಲ್ಲಿ ದೊಡ್ಡ ಹಗರಣವೊಂದು ನಡೆದಿರುವುದು ನಿನ್ನೆ ಬೆಳಕಿಗೆ ಬಂದಿದೆ. ಆ ಇಲಾಖೆ ನೌಕರ 187 ಕೋಟಿ ಹಗರಣದ ಬಗ್ಗೆ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣವೇ ಇಲಾಖೆಯ ಸಚಿವ ನಾಗೇಂದ್ರರನ್ನು ವಜಾ ಮಾಡಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಹೋರಾಟ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಕಲಬುರಗಿಯಲ್ಲಿ ಮಾತನಾಡಿದ ಅವರು, ನಿಜವಾಗಿಯೂ ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್. ಕೂಡಲೆ ಸಿಎಂ ಸಿದ್ದರಾಮಯ್ಯ ಆ ಇಲಾಖೆಯ ಸಚಿವರನ್ನು ಮಂತ್ರಿ ಮಂಡಲದಿಂದ ಕೈ ಬಿಡಬೇಕು ಎಂದರು. ಹೈಕೋರ್ಟ್ ನ್ಯಾಯಧೀಶರ ನೈತೃತ್ವದಲ್ಲಿ ಪ್ರಕರಣದ ತನಿಖೆಯಾಗಬೇಕು. ಈ ವಿಚಾರವಾಗಿ ನಾವು ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಸೂಪರಿಂಡೆಂಟ್ ಚಂದ್ರಶೇಖರ್ ಶಿವಮೊಗ್ಗದ ವಿನೋಬ ನಗರದ ಕೆಂಚಪ್ಪ ಲೇಔಟ್ನಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಗಮದಲ್ಲಿ 187 ಕೋಟಿ ಹಗರಣ ನಡೆದಿದ್ದು, ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎನ್ನಲಾಗಿತ್ತು. ಇದಕ್ಕೆ ಪೂರಕ ಅಂಶಗಳು ಅವರು ಬರೆದಿಟ್ಟಿದ್ದ ಡೆತ್ನೋಟ್ನಲ್ಲಿತ್ತು.
ಮಧು ಬಂಗಾರಪ್ಪ ಹೇರ್ ಕಟಿಂಗ್ ಬಗ್ಗೆ ನೀಡಿದ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ವಿಜಯೇಂದ್ರ, ಅವರಿಗೆ ಕೇಳಿದ್ದು ನನ್ನ ಪ್ರಶ್ನೆಯಲ್ಲ. ಅಲ್ಲಿನ ಕೆಲ ಶಿಕ್ಷಕರು ಕೇಳಿದ್ದನ್ನು ನಾನು ಹೇಳಿದ್ದೆ ಅಷ್ಟೆ. ಕನ್ನಡ ಬರಲ್ಲ ಎಂದು ಮಧು ಬಂಗಾರಪ್ಪ ಅವರೇ ಒಪ್ಪಿಕೊಂಡಿದ್ದಾರೆ. ಶಿಕ್ಷಣ ಸಚಿವರಾಗಿ ಹೇಗೆ ಇರಬೇಕು ಎಂದು ಶಿಕ್ಷಕರು ಹೇಳಿದ್ದನ್ನೇ ಹೇಳಿದ್ದೆ. ಮಧು ಬಂಗಾರಪ್ಪ ಬಹಳ ಮನಸ್ಸಿಗೆ ಹಚ್ಚಿಕೊಂಡಿದ್ದಾರೆ ಅನ್ಸುತ್ತೆ ಎಂದರು.
ಹಣಕಾಸಿನ ಸಮಸ್ಯೆ ಇದ್ರೆ ಯುವ ಮೋರ್ಚಾದವರಿಗೆ ಹೇಳುತ್ತೇನೆ. ಪ್ರತಿ ತಿಂಗಳು ಹೇರ್ ಕಟ್ಗೆ ಮಧು ಬಂಗಾರಪ್ಪಗೆ ಹಣ ಕೊಡಬೇಕು ಎಂದು ಹೇಳುತ್ತೇನೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.