ಪುತ್ತೂರು : ಕಳೆದ 60 ವರ್ಷಗಳ ಅವಧಿಯಲ್ಲಿ ಲೆಕ್ಕಕ್ಕೇ ಸಿಗದಷ್ಟು ವಾಹನಗಳನ್ನು ಸುಲಲಿತವಾಗಿ ದಾಟಿಸಿ ಕೊನೆಯವರೆಗೂ ಒಂದೇ ಒಂದು ಕಪ್ಪು ಚುಕ್ಕೆಯನ್ನೂ ದಾಖಲಿಸದೆ ಅತ್ಯಂತ ಯಶಸ್ವಿಯಾಗಿ ಆಯುಷ್ಯ ಪೂರ್ಣಗೊಳಿಸಿದ ಇದೀಗ ನೋಡ ನೋಡುತ್ತಲೇ ನೇಪಥ್ಯಕ್ಕೆ ಸರಿದಿದೆ…!
ಮೇ 20 ರಂದು ಅಧಿಕೃತವಾಗಿ ಕುಂಬ್ರ ಹಳೆ ಸೇತುವೆಯ ಬಳಕೆ ನಿಂತು ಹೋಗಿದೆ. ಸೇತುವೆಯ ಎರಡೂ ತುದಿಗಳನ್ನು ಸಂಪರ್ಕಿಸುವ ರಸ್ತೆಯನ್ನು ಕೂಡ ಮುಚ್ಚಲಾಗಿದ್ದು, ಹೊಸ ಸೇತುವೆಗೆ ಹೊಸ ಸಂಪರ್ಕ ರಸ್ತೆ ನಿರ್ಮಿಸಿ ಹಳೆ ಸೇತುವೆಯ ಎರಡೂ ಭಾಗದ 100 ಮೀಟರ್ ದೂರದಲ್ಲಿ ರಾ.ಹೆ. 275ಕ್ಕೆ ಜೋಡಿಸಲಾಗಿದೆ. ಮಾತ್ರವಲ್ಲದೆ ಹಳೆ ಸೇತುವೆಯ ಸಂಪರ್ಕ ರಸ್ತೆಯ ಡಾಂಬರ್ ಕಿತ್ತು ಹಾಕಲಾಗಿದ್ದು, ಮಣ್ಣಿನ ರಾಶಿ ಸುರಿದು ಹಳೆ ಸೇತುವೆಗೆ ಸಂಪರ್ಕವನ್ನೇ ರದ್ದುಪಡಿಸಲಾಗಿದೆ. ಪುತ್ತೂರು ಹೊರವಲಯದ ಪ್ರಮುಖ ಜಂಕ್ಷನ್ ಕುಂಬ್ರ. ಈ ಪೇಟೆಗೆ ಮಹತ್ವ ಇರುವಂತೆಯೇ ಇಲ್ಲಿನ ಸೇತುವೆಗೂ ಮಹತ್ವವಿದೆ. 6 ವರ್ಷಗಳ ಹಿಂದೆ ಸೇತುವೆಯ ಪಕ್ಕದ ಸ್ಪ್ಯಾಬ್‌ನಲ್ಲಿ ಬಿರುಕು ಮೂಡಿದಾಗ ಅಪಾಯದ ಕರೆಗಂಟೆ ಬಾರಿಸಿತ್ತು.
ಇಲಾಖೆಯ ತಜ್ಞರ ತಂಡ ಹೆದ್ದಾರಿಯಲ್ಲಿ ಬರುವ ಸೇತುವೆಗಳ ಬಗ್ಗೆ ಅಧ್ಯಯನ ನಡೆಸಿ ಕುಂಬ್ರ ಸೇತುವೆಯೂ ಸೇರಿದಂತೆ ಪುತ್ತೂರು- ಸುಳ್ಯ ನಡುವಿನ 8 ಸೇತುವೆಗಳ ಬದಲಾವಣೆಗೆ ಶಿಫಾರಸು ಮಾಡಿತ್ತು. ಅದರಂತೆ 2022ರಲ್ಲಿ 8 ಸೇತುವೆಗಳ ಮರು ನಿರ್ಮಾಣಕ್ಕೆ 58 ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿ ಮುಗಿದಿದೆ.
ಕುಂಬ್ರ ಹಳೆಯ ಸೇತುವೆಯ ಮೇಲೆ ಇಳಿಜಾರು ರಸ್ತೆ ಅರ್ಧಚಂದ್ರಾಕೃತಿ ತಿರುವು ಹೊಂದಿತ್ತು. ಇದರಿಂದ ಈ ಭಾಗದಲ್ಲಿ ಅಪಘಾತಗಳು ಸಂಭವಿಸುತ್ತಿತ್ತು. ಪಕ್ಕದಲ್ಲಿ 100 ಅಡಿ ಎತ್ತರದ ಗುಡ್ಡವಿದ್ದ ಕಾರಣ ಆ ಕಾಲದಲ್ಲಿಅನಿವಾರ್ಯವಾಗಿ ತಿರುವು ರಸ್ತೆ ಮಾಡಲಾಗಿತ್ತು. ಈಗ ಆಧುನಿಕ ತಂತ್ರಜ್ಞಾನವಿರುವ ಹಿನ್ನೆಲೆಯಲ್ಲಿ ನೂತನ ಸೇತುವೆಯ ನೇರಕ್ಕೆ ಸಂಪೂರ್ಣ ಗುಡ್ಡವನ್ನೇ ಕತ್ತರಿಸಲಾಗಿದೆ.
ಇಲ್ಲಿನ ಮಸೀದಿಯ ಮುಂಭಾಗದಲ್ಲಿ ಬೆಟ್ಟ ಸವರಿ, ಪೂರ್ತಿ ಗುಡ್ಡ ತೆರವು ಮಾಡಿ ನೇರ ರಸ್ತೆ ನಿರ್ಮಿಸಲಾಗಿದೆ. ಸೇತುವೆಯ ಒಂದು ಭಾಗದಲ್ಲಿ5 ಅಡಿ ಎತ್ತರಕ್ಕೆ ಮಣ್ಣು ಸುರಿದು ನೂತನ ಸಂಪರ್ಕ ರಸ್ತೆ ನಿರ್ಮಿಸಲಾಗಿದೆ.