ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ತಿಂಗಳ ಹಿಂದೆ ಹುಲಿ ಉಗುರು ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್, ಚಾಲೆಜಿಂಗ್ ಸ್ಟಾರ್ ದರ್ಶನ್, ಜಗ್ಗೇಶ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಗೆ ಉರುಳಾಗಿ ಪರಿಣಮಿಸಿತ್ತು. ಘಟನೆಯ ಬಳಿಕ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಹೀಗಾಗಿ ಸರ್ಕಾರ ವನ್ಯಜೀವಿ ಸಂಪತ್ತು ಹಾಗೂ ಪ್ರಾಣಿಗಳ ಅಂಗಾಂಗ ಹೊಂದಿದ್ದವರಿಗೆ ಅವುಗಳನ್ನು ಮರಳಿಸಲು 90 ದಿನಗಳ ಗಡುವು ನೀಡಿತ್ತು. ಈಗ ಮರಳಿಸುವ ಗಡುವು ಮುಗಿದಿದ್ದು ಭರ್ಜರಿ ಸಂಪತ್ತು ಅರಣ್ಯ ಇಲಾಖೆ ಕೈ ಸೇರಿದೆ.
ಹುಲಿ ಉಗುರು, ಚರ್ಮ, ಆನೆದಂತ, ಜಿಂಕೆ ಕೊಂಬು ಸೇರಿದಂತೆ ವನ್ಯಜೀವಿಗಳ ವಸ್ತು ಹೊಂದಿದ್ದವರಿಗೆ ಶಾಕ್ ನೀಡಲು ಅರಣ್ಯ ಇಲಾಖೆ ಮುಂದಾಗಿತ್ತು. ಅನೇಕರ ವಿರುದ್ಧ ಸಾಲು ಸಾಲು ಆರೋಪ ಕೇಳಿ ಬರುತ್ತಿದ್ದಂತೆಯೇ ಸರ್ಕಾರ ಒಂದು ಅವಕಾಶ ನೀಡಿ, ವನ್ಯಜೀವಿ ಅಂಗಾಂಗ ಮರಳಿಸಲು 3 ತಿಂಗಳ ಕಾಲಾವಕಾಶ ನೀಡಿತ್ತು. ಅದರಂತೆ ಈಗ ಹುಲಿ ಉಗುರು, ಆನೆ ದಂತ, ಜಿಂಕೆ ಕೊಂಬು ಸೇರಿದಂತೆ ಅಕ್ರಮವಾಗಿಟ್ಟುಕೊಂಡಿದ್ದ ವನ್ಯ ಜೀವಿಯ ಅಂಗಾಂಗ, ಸಂಪತ್ತುಗಳನ್ನು ಅನೇಕರು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
2024ರ ಜನವರಿ 11ರಿಂದ ಮೂರು ತಿಂಗಳ ಕಾಲ ವನ್ಯಜೀವಿ ಸಂಪತ್ತು ಹಾಗೂ ವಸ್ತುಗಳನ್ನು ಅರಣ್ಯ ಇಲಾಖೆ ಹಿಂಪಡೆದಿದೆ. ತಿಳವಳಿಕೆ ಇಲ್ಲದೆ ವನ್ಯಜೀವಿ ಸಂಪತ್ತು ಹೊಂದಿದ್ದವರು ಹುಲಿ ಉಗುರು, ಹಲ್ಲು, ಚರ್ಮ, ಆನೆ ದಂತ, ಬಾಲ, ಜಿಂಕೆ ಕೊಂಬು ಹೀಗೆ ವನ್ಯಜೀವಿಗಳ ಅವಯವಗಳನ್ನು ಅರಣ್ಯ ಇಲಾಖೆಯ ಆರ್‌ಎಫ್‌ಒ, ಎಸಿಎಫ್, ಡಿಸಿಎಫ್ ಕಚೇರಿ ಇಲ್ಲವೇ ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಈ ವೇಳೆ ಗರಿಷ್ಠ ಪ್ರಮಾಣದ ಸಂಪತ್ತು ಬೆಂಗಳೂರು ನಗರದಿಂದಲೇ ಮರಳಿ ಇಲಾಖೆ ಕೈ ಸೇರಿದೆ. ಥೇಟ್ ಹುಲಿಯ ರೂಪದಲ್ಲಿರುವ ಅಸಲಿ ಹುಲಿ ಚರ್ಮದಲ್ಲಿ ನಿರ್ಮಿಸಿರುವ ಹುಲಿಯ ಮಾದರಿ, ಕಾಡು ಕೋಣದ ಬೆಲೆಬಾಳುವ ಕೊಂಬುಗಳು, ಕೋಟ್ಯಂತರ ರೂಪಾಯಿ ಬೆಲೆಯ ವನ್ಯಜೀವಿಯ ಚರ್ಮ ಹಾಗೂ ಚರ್ಮದಿಂದ ಮಾಡಿರುವ ಗೃಹ ಉಯೋಯೋಗಿ ವಸ್ತುಗಳು ಅರಣ್ಯ ಇಲಾಖೆಗೆ ವಾಪಸಾಗಿವೆ. ಸಿಲಿಕಾನ್ ಸಿಟಿಯಲ್ಲಿಯೇ ಗರಿಷ್ಠ ಸಂಖ್ಯೆಯಲ್ಲಿ ವಸ್ತುಗಳು ಮರಳಿಸಲ್ಪಟ್ಟಿವೆ. ಹುಲಿ ಚರ್ಮ ಹಾಗೂ ಹುಲಿಯ ಉಗುರು ಸೇರಿದಂತೆ 110 ಕ್ಕೂ ಹೆಚ್ಚು ವನ್ಯಜೀವಿ ವಸ್ತುಗಳನ್ನ ಜನರು ಮರಳಿಸಿದ್ದಾರೆ.
ಸರ್ಕಾರದ ಕಾಲಾವಕಾಶ ಈಗ ಮುಗಿದಿದೆ. ಈ ಬಳಿಕವೂ ಯಾರಾದರೂ ಇಂತಹ ವನ್ಯಜೀವಿ ಉತ್ಪನ್ನಗಳನ್ನು ಇಟ್ಟುಕೊಂಡಿದ್ದರೆ, ಸಾಗಾಟ, ಮಾರಾಟ ಮಾಡಿದರೆ, ಉಡುಗೊರೆ ನೀಡಿದರೆ ಅವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ. ಮರಳಿಸಲು ಈಗಾಗಲೇ ಕಾಲವಕಾಶ ಪಡೆಯದವರು ಕಾನೂನು ಕ್ರಮ ಎದುರಿಸಬೇಕಾಗಲಿದೆ.