ಮೈಸೂರು: ತೆಂಗಿನ ಮರದಿಂದ ಬಿದ್ದು ಯುವಕನೊರ್ವ ಮೃತಪಟ್ಟಿದ್ದಾನೆ. ಎಳನೀರು ಕೀಳುವಾಗ ಅವಘಡ ಸಂಭವಿಸಿದೆ. ಮೈಸೂರಿನ ಕೆಆರ್ ನಗರದ ಮುಂಜನಹಳ್ಳಿಯಲ್ಲಿ ಘಟನೆ ನಡೆದಿದೆ. ಚೇತನ್ (27) ಮೃತ ದುರ್ದೈವಿ.
ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಎಳೆನೀರು ತರಲು ಚೇತನ್ ಜಮೀನಿಗೆ ಹೋಗಿದ್ದ. ಮರವೇರಿ ಎಳನೀರು ಕೀಳುವಾಗ ಕಾಲು ಜಾರಿದೆ. ಈ ವೇಳೆ ಮರದ ಮೇಲಿಂದ ಬಿದ್ದ ರಭಸಕ್ಕೆ ಚೇತನ್ ತಲೆಗೆ ಗಂಭೀರ ಗಾಯವಾಗಿದೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡಿದ್ದ ಚೇತನ್ನನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕೆಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಆರ್ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.