ಕೋಡಿಂಬಾಡಿ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಇತರರು ಜಮೀನಿಗೆ ಅನಧಿಕೃತವಾಗಿ ಪ್ರವೇಶಿಸಿ ಕಾನೂನು ಬಾಹಿರ ಚಟುವಟಿಕೆ ನಡೆಸಿರುವುದಾಗಿ ಆರೋಪಿಸಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಕೋಡಿಂಬಾಡಿ ಗ್ರಾಮದ ಮೇಲಿನಹಿತ್ಲು ನಿವಾಸಿ ಮೋಹನ್ ಕುಮಾರ್ ಅವರ ಪತ್ನಿ ಪವಿತ್ರ ಮೋಹನ್ ಕುಮಾರ್ ದೂರು ನೀಡಿದವರು.‘ತಾನು ಕೋಡಿಂಬಾಡಿ ಗ್ರಾಮದ ಸ.ನಂ.134-ಐಪಿ1, 1.26 ಎಕ್ರೆ ಆಸ್ತಿಯ ಜೊತೆ ಹಕ್ಕುದಾರರಾಗಿದ್ದು, ಇದಕ್ಕೆ ಕೋಡಿಂಬಾಡಿ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಇತರರು ಅನಧಿಕೃತ ಪ್ರವೇಶ ಮಾಡಿ ಜಾಗ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿದ ವಿಚಾರವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಈ ಕುರಿತು ಅವರಿಗೆ ನೋಟೀಸ್ ಜಾರಿ ಮಾಡಲಾಗಿತ್ತು.ಇದೀಗ ಮೇ.23ಕ್ಕೆ ಮತ್ತೆ ನನ್ನ ಹಕ್ಕಿನ ಆಸ್ತಿಗೆ ಅತಿಕ್ರಮಣ ಪ್ರವೇಶ ಗೈದು ಹಿಟಾಚಿ ಮೂಲಕ ದಾವಾ ಆಸ್ತಿಯನ್ನು ಅಗೆದಿದ್ದಾರೆ’ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಪೊಲೀಸರು ದೂರನ್ನು ಸ್ವೀಕರಿಸಿ ಪರಿಶೀಲಿಸಿ, ‘ನೀವು ಅಂಚೆ ಮೂಲಕ ಕಳುಹಿಸಿದ ದೂರು ಅರ್ಜಿಯನ್ನು ಸ್ವೀಕರಿಸಿ ಪರಿಶೀಲಿಸಿದಾಗ ನಿಮಗೂ ಸ್ಥಳೀಯ ಗ್ರಾ.ಪಂ.ಗೂ ಜಾಗಕ್ಕೆ ಸಂಬಂಧಿಸಿ ಸಿವಿಲ್ ಸ್ವರೂಪದ ವಿವಾದವಿದ್ದು, ಪುತ್ತೂರು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಕುರಿತು ಎದ್ರಿದಾರರು ತಿಳಿಸಿದ್ದಾರೆ. ನೀವು ದೂರಿನಲ್ಲಿ ತಿಳಿಸಿದ ವಿಚಾರವು ಸಿವಿಲ್ ಸ್ವರೂಪದ ವಿವಾದವಾಗಿರುವುದರಿಂದ ನೀವು ಸಂಬಂಧಪಟ್ಟ ಸಿವಿಲ್ ನ್ಯಾಯಾಲಯದಲ್ಲಿ ವ್ಯವಹರಿಸಿ ವಿವಾದವನ್ನು ಬಗೆಹರಿಸಿಕೊಳ್ಳುವಂತೆ ತಿಳುವಳಿಕೆ ನೀಡಿ ದೂರು ಅರ್ಜಿಯನ್ನು ವಿಲೇ ಮಾಡಲಾಗಿದೆ’ ಎಂದು ದೂರುದಾರರಿಗೆ ಜೂ.3ಕ್ಕೆ ಪೊಲೀಸರು ಹಿಂಬರಹ ನೀಡಿದ್ದಾರೆ.