ಬೆಂಗಳೂರು: ಈ ಕ್ಷಣದಲ್ಲೇ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆದರೆ ಮತ್ತು ಲೋಕಸಭಾ ಚುನಾವಣೆಯಂತೆಯೇ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರೆ, ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ 142 ಸ್ಥಾನಗಳನ್ನು ಗೆಲ್ಲಲಿದೆ. ಈ ಮೂಲಕ ಇದು ರಾಜ್ಯದಲ್ಲಿ ಕಾಂಗ್ರೆಸ್ 2023ರಲ್ಲಿ ಪಡೆದ ಭಾರಿ ಜನಾದೇಶ ಬುಡಮೇಲಾಗಲಿದೆ. ಡೆಕ್ಕಲ್ ಹೆರಾಲ್ಡ್ ಪತ್ರಿಕೆಯು ಈ ಬಗ್ಗೆ ವರದಿಯೊಂದನ್ನು ಮಾಡಿದ್ದು ಜೆಡಿಎಸ್, ಬಿಜೆಪಿ ಮೈತ್ರಿಯಿಂದಾಗಿ ಕಾಂಗ್ರೆಸ್ಗೆ ನಷ್ಟವಾಗಲಿದೆ ಎಂದು ವರದಿ ಮಾಡಿದೆ.
ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ವಿಭಿನ್ನವಾಗಿ ಮತ ಚಲಾಯಿಸುವ ಸುದೀರ್ಘ ಇತಿಹಾಸವನ್ನು ಕರ್ನಾಟಕದ ಮತದಾರರು ಹೊಂದಿದ್ದಾರೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದಿತ್ತು. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರು 28 ಸ್ಥಾನಗಳ ಪೈಕಿ ಬಿಜೆಪಿಗೆ 17 ಸೀಟ್ ಕೊಟ್ಟಿದ್ದಾರೆ. ಜೆಡಿಎಸ್ ಸ್ಪರ್ಧಿಸಿರುವ 3ರಲ್ಲಿ 2 ಮತ್ತು ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದಿದ್ದುಕೊಂಡಿದೆ. 2019ರಲ್ಲಿ ಕೇವಲ ಒಂದು ಸ್ಥಾನ ಗೆದ್ದಿದ್ದ ಕಾಂಗ್ರೆಸ್ 14ರಿಂ 15 ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ, ಅದು ಕೆಲಸ ಮಾಡಿಲ್ಲ.
ರಾಜ್ಯ ಸರ್ಕಾರದ 18 ಮಂತ್ರಿಗಳು ತಮ್ಮ ಸ್ವಂತ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಮುನ್ನಡೆ ಕೊಡಿಸಲು ವಿಫಲರಾಗಿದ್ದರು. ಇದು ಕಾಂಗ್ರೆಸ್ ಪಾಲಿಗೆ ಕಟು ಸತ್ಯವಾಗಿದೆ. ಉದಾಹರಣೆಗೆ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಬಿಟಿಎಂ ಲೇಔಟ್ ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯ ಅವರಿಗೆ 9,000 ಕ್ಕೂ ಹೆಚ್ಚು ಮತಗಳ ಲೀಡ್ ಕೊಟ್ಟಿತ್ತು. ಸಚಿವರ ಪುತ್ರಿ ಸೌಮ್ಯಾ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಅದೇ ರೀತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅವರ ಪುತ್ರ ಮೃಣಾಲ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆದರೆ ಅಲ್ಲಿ ಬಿಜೆಪಿ 50,000 ಮತಗಳ ಮುನ್ನಡೆ ಸಾಧಿಸಿದೆ.