22 ಡಿಸೆಂಬರ್ 2000ರಂದು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯ ಮೇಲೆ ಭಯೋತ್ಪಾದಕ ದಾಳಿ ನಡೆಯಿತು . ಇದನ್ನು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ನಡೆಸಿತ್ತು. ಘಟನೆಯಲ್ಲಿ ಓರ್ವ ಭಾರತೀಯ ಸೈನಿಕ ಹಾಗೂ ಓರ್ವ ನಾಗರಿಕ ಸ್ಥಳದಲ್ಲೇ ಮೃತಪಟ್ಟಿದ್ದರು. ಬಳಿಕ ಆಸ್ಪತ್ರೆಯಲ್ಲಿ ಮತ್ತೋರ್ವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಶ್ರೀನಗರದ ಇಬ್ಬರು ಸಂಚುಕೋರರ ಮನೆಯಲ್ಲಿ ಕೆಂಪು ಕೋಟೆಯ ಮೇಲೆ ದಾಳಿಯ ಸಂಚು ರೂಪಿಸಲಾಗಿ. ಆರಿಫ್ 1999ರಲ್ಲಿ ಇತರ ಮೂವರು ಎಲ್ಇಟಿ ಉಗ್ರರೊಂದಿಗೆ ಅಕ್ರಮವಾಗಿ ಪ್ರವೇಶಿಸಿದ್ದ. 2000ನೇ ಇಸ್ವಿಯ ಡಿಸೆಂಬರ್ 22ರಂದು ಕೆಂಪು ಕೋಟೆಗೆ ನುಗ್ಗಿದ ಮೂವರು ಉಗ್ರಗಾಮಿಗಳಾದ ಅಬು ಶಾದ್, ಅಬು ಬಿಲಾಲ್ ಮತ್ತು ಅಬು ಹೈದರ್ ದಾಳಿ ನಡೆಸಿದ್ದರು.
ಪಾಕಿಸ್ತಾನಿ ಪ್ರಜೆ ಮತ್ತು ನಿಷೇಧಿತ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆ ಉಗ್ರಗಾಮಿ ಆರಿಫ್‌ನನ್ನು ದಾಳಿಯ ನಾಲ್ಕು ದಿನಗಳ ನಂತರ ದೆಹಲಿ ಪೊಲೀಸರು ಬಂಧಿಸಿದ್ದರು. ಮೊಹಮ್ಮದ್ ಆರಿಫ್ ಅಲಿಯಾಸ್ ಅಶ್ಫಾಕ್ ಪಾಕಿಸ್ತಾನಿ ಪ್ರಜೆಯಾಗಿದ್ದು, ಅಕ್ರಮವಾಗಿ ಭಾರತದ ಭೂಪ್ರದೇಶವನ್ನು ಪ್ರವೇಶಿಸಿ, ದಾಳಿ ಮಾಡಿದ್ದು ಸಾಬೀತಾಗಿತ್ತು. ಉಗ್ರಗಾಮಿಗಳಾದ ಅಬು ಶಾದ್, ಅಬು ಬಿಲಾಲ್ ಮತ್ತು ಅಬು ಹೈದರ್ ಎನ್‌ಕೌಂಟರ್‌ನಲ್ಲಿ ಸತ್ತಿದ್ದರು. ದಾಳಿಯನ್ನು ನಡೆಸಲು ಇತರ ಉಗ್ರರೊಂದಿಗೆ ಸಂಚು ರೂಪಿಸಿದ ಆರೋಪದಲ್ಲಿ ಆರಿಫ್ ತಪ್ಪಿತಸ್ಥನೆಂದು ಸಾಬೀತಾಯಿತು, ವಿಚಾರಣಾ ನ್ಯಾಯಾಲಯವು ಅಕ್ಟೋಬರ್ 2005 ರಲ್ಲಿ ಅವರಿಗೆ ಮರಣದಂಡನೆ ವಿಧಿಸಿತು. ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಂತರದ ಮೇಲ್ಮನವಿಗಳಲ್ಲಿ ನಿರ್ಧಾರವನ್ನು ಎತ್ತಿಹಿಡಿದವು. ನವೆಂಬರ್ 3, 2022ರಂದು ಆರಿಫ್ ಸಲ್ಲಿಸಿದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಪ್ರಕರಣದಲ್ಲಿ ಅವರಿಗೆ ನೀಡಲಾದ ಮರಣದಂಡನೆಯನ್ನು ದೃಢೀಕರಿಸಿತು. ಮೇ 15 ರಂದು ಸ್ವೀಕರಿಸಿದ ಆರೀಫ್ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದಾಗಿ ರಾಷ್ಟ್ರಪತಿ ಭವನ ಮಾಹಿತಿ ನೀಡಿದೆ.